- ರಾಷ್ಟ್ರೀಯ ಏಕತಾ ಓಟಕ್ಕೆ ಚಾಲನೆ । ಸ್ಪರ್ಧೆಗಳ ವಿಜೇತರಿಗೆ ಬಹುಮಾನ
- - -ಕನ್ನಡಪ್ರಭ ವಾರ್ತೆ ದಾವಣಗೆರೆ 150ನೇ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ಶುಕ್ರವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ಏಕತಾ ಓಟವನ್ನು ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪ ಸರ್ಕಲ್‌ನಿಂದ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಏಕತಾ ಓಟಕ್ಕೆ ಚಾಲನೆ ನೀಡಿ ನಂತರ ಪೊಲೀಸ್ ಕವಾಯತು ಮೈದಾನದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಅ.31ರಂದು ಸರ್ದಾರ್ ವಲ್ಲಭ ಬಾಯಿ ಪಟೇಲ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ಓಟ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಂತೆಯೇ ಇಂದೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 570 ರಾಜ ಸಂಸ್ಥಾನಗಳನ್ನು ಒಟ್ಟುಗೂಡಿಸಿದ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್. ಎಲ್ಲ ರಾಜ್ಯಗಳು ತಮ್ಮ ಭಾಷೆಗಳ, ಸಂಸ್ಕೃತಿಯ, ಪ್ರಾದೇಶಿಕ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಾಗಿ ವಿಂಗಡನೆಯಾಗಿವೆ. ಅವುಗಳನ್ನು ಒಂದುಗೂಡಿಸಲು ಸರ್ದಾರ್ ವಲ್ಲಭ ಬಾಯಿ ಪಟೇಲ್ ಬಹಳ ಶ್ರಮವಹಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅವರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿವೈಎಸ್‌ಪಿಗಳಾದ ಪಿ.ಬಿ.ಪ್ರಕಾಶ್, ಶರಣಬಸವ ಭಜಂತ್ರಿ, ಅಧಿಕಾರಿಗಳು, ಸಿಬ್ಬಂದಿ, ಇತರರು ಭಾಗವಹಿಸಿದ್ದರು.
ಏಕತಾ ಓಟ ಸಾಗಿದ ಮಾರ್ಗ:ರಾಷ್ಟ್ರೀಯ ಏಕತಾ ಓಟವು ಗುಂಡಿ ವೃತ್ತದಿಂದ ಆರಂಭವಾಗಿ ಚಿಗಟೇರಿ ಜಿಲ್ಲಾಸ್ಪತ್ರೆ ಮಾರ್ಗ, ವಿದ್ಯಾರ್ಥಿ ಭವನ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಎವಿಕೆ ಮಹಿಳಾ ಕಾಲೇಜು ರಸ್ತೆ, ಪಿ.ಬಿ. ರಸ್ತೆಯ ರೇಣುಕಾ ಮಂದಿರ, ಅರುಣಾ ಸರ್ಕಲ್‌ನಿಂದ ಪಿ.ಜೆ. ಬಡಾವಣೆಯಲ್ಲಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯಗೊಂಡಿತು.
ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಎಸ್‌ಪಿ ಉಮಾ ಪ್ರಶಾಂತ್ ಬಹುಮಾನ ವಿತರಿಸಿದರು.- - -
(ಕೋಟ್) ಇದೇ ನವೆಂಬರ್ 16, 17, 18ರಂದು ಜಿಲ್ಲಾ ಪೊಲೀಸ್ ಕ್ರೀಡಾಕೂಟಗಳಿದ್ದು, ವಿವಿಧ ವಿಭಾಗಗಳಿಂದ ತಂಡಗಳೊಂದಿಗೆ ಆಟವನ್ನು ಆಡಿದರೂ ಆಟಗಳ ಸಮಾರೋಪದಲ್ಲಿ ನಾವೆಲ್ಲರೂ ಒಂದು ಎಂಬ ಏಕತೆಯನ್ನು ತೋರಿಸುತ್ತೀರಿ. ಮುಂದಿನ ದಿನಗಳ ಕ್ರೀಡಾಕೂಟಗಳಿಗೆ ಎಲ್ಲರೂ ಸಿದ್ಧರಾಗಿರಿ.- ಉಮಾ ಪ್ರಶಾಂತ್, ಎಸ್‌ಪಿ, ದಾವಣಗೆರೆ ಜಿಲ್ಲೆ.
- - --31ಕೆಡಿವಿಜಿ31, 32:
ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಏಕತಾ ಓಟವನ್ನು ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು.