ಮೂಲ ಸಂಪನ್ಮೂಲಗಳ ಜಾಗೃತಿಗೆ ಮುಂದಾದ ವಾಲ್ಮಿ

KannadaprabhaNewsNetwork |  
Published : Sep 17, 2025, 01:06 AM IST
ಧಾರವಾಡ ಕೃಷಿಮೇಳದಲ್ಲಿ ವಾಲ್ಮಿ ನಿರ್ದೇಶಕ ಡಾ. ಗಿರೀಶ ಎನ್‌. ಮರಡ್ಡಿ ರೈತರಿಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ 1985ರಲ್ಲಿ ಆರಂಭಗೊಂಡ "ವಾಲ್ಮಿ " ಬದುಕಿನ ಮೂಲ ಸಂಪನ್ಮೂಲಗಳಾದ ಜಲ, ನೆಲ ಅಭಿವೃದ್ಧಿ, ಸಂರಕ್ಷಣೆ ಹಾಗೂ ನಿರ್ವಹಣೆ ವಿಷಯಗಳಲ್ಲಿ ಭಾಗೀದಾರರಾದ ರೈತರ ಮತ್ತು ಅಭಿಯಂತರರ ಸಾಮರ್ಥ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದೆ.

ಅಜೀಜಅಹ್ಮದ ಬಳಗಾನೂರ

ಧಾರವಾಡ: ರಾಜ್ಯ ಸರ್ಕಾರದ ಜಲ ಹಾಗೂ ನೆಲದ ಮಹತ್ವ ಮನಗಂಡು ಅವುಗಳ ಅಭಿವೃದ್ಧಿ, ಸಂರಕ್ಷಣೆ ಹಾಗೂ ಸದ್ಬಳಕೆಯ ಬಗ್ಗೆ ಸಾವಿರಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರ ನೆಚ್ಚಿನ ಸರ್ಕಾರಿ ಸಂಸ್ಥೆಯಾಗಿ ಈಗ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಮುನ್ನಡೆಯುತ್ತಿದೆ.

ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ 1985ರಲ್ಲಿ ಆರಂಭಗೊಂಡ "ವಾಲ್ಮಿ " ಬದುಕಿನ ಮೂಲ ಸಂಪನ್ಮೂಲಗಳಾದ ಜಲ, ನೆಲ ಅಭಿವೃದ್ಧಿ, ಸಂರಕ್ಷಣೆ ಹಾಗೂ ನಿರ್ವಹಣೆ ವಿಷಯಗಳಲ್ಲಿ ಭಾಗೀದಾರರಾದ ರೈತರ ಮತ್ತು ಅಭಿಯಂತರರ ಸಾಮರ್ಥ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದೆ.

ನೀರಾವರಿ ನಿರ್ವಹಣಾ ಸುಧಾರಣೆಗಾಗಿ ಸಂಸ್ಥೆಯು ಕರ್ನಾಟಕದ ಮುಂಚೂಣಿ ಕಾರ್ಯಕ್ರಮವಾದ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಾಗೃತಿ ಮೂಡಿಸುತ್ತಿದೆ.

ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಜಾಗತಿಕ ಹಾಗೂ ರಾಷ್ಟ್ರೀಯ ಮನ್ನಣೆ ಪಡೆದ ಪರಿಕಲ್ಪನೆಯಾಗಿದ್ದು, ಭಾರತದ ಅನೇಕ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಮಲಪ್ರಭಾ, ಘಟಪ್ರಭಾ, ತುಂಗಭದ್ರಾ, ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ, ಭದ್ರಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ. ಇವುಗಳ ಮೂಲಕ ಸಮರ್ಥ, ಸಮಾನ ಮತ್ತು ಸುಸ್ಥಿರ ನೀರಾವರಿಯನ್ನು ಸಾಧಿಸಬಹುದಾಗಿದೆ.

ಶೃಂಗ ಮಹಾಮಂಡಳಿ ರಚನೆ: ಪ್ರತಿಯೊಂದು ಅಚ್ಚುಕಟ್ಟು ಪ್ರದೇಶದಲ್ಲಿನ ತಳಮಟ್ಟ, ಯೋಜನಾ ಮಟ್ಟದಲ್ಲಿ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಅದರಂತೆ ಆರೂ ಅಚ್ಚುಕಟ್ಟು ಪ್ರದೇಶದಲ್ಲಿರುವ ನೀರು ಬಳಕೆದಾರರ ಸಂಘದವರು ಹಾಗೂ ರೈತರನ್ನು ಒಗ್ಗೂಡಿಸಿ ಕಾರ್ಯಚಟುವಟಿಕೆ ಕೈಗೊಳ್ಳುವ ಉದ್ದೇಶದಿಂದ "ಶೃಂಗ ಮಹಾಮಂಡಳ " ರಚಿಸಲಾಗಿದೆ. ಇದಕ್ಕೆ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ. ಶಿವಕುಮಾರ ಅಧ್ಯಕ್ಷರಾಗಿದ್ದರೆ, ಸಣ್ಣ ನೀರಾವರಿ ಸಚಿವರಾಗಿರುವ ಎನ್‌.ಎಸ್‌. ಭೋಸರಾಜು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ವಾಲ್ಮಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತದೆ.

ವಾಟ್ಸ್‌ಆ್ಯಪ್‌ ರಚನೆ: ಅಚ್ಚುಕಟ್ಟು ಪ್ರದೇಶದ ರೈತರು, ನೀರು ಬಳೆಕೆದಾರರ ಸಂಘದವರಿಗೆ ಮಾಹಿತಿ ತಿಳಿಸುವುದಕ್ಕಾಗಿ ವಾಟ್ಸ್‌ಆ್ಯಪ್‌ ರಚನೆ ಮಾಡಲಾಗಿದೆ. ಜತೆಗೆ ರಾಜ್ಯಮಟ್ಟದ ಒಂದು ವಾಟ್ಸ್‌ಆ್ಯಪ್‌ ರಚಿಸಿ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ.

ಪ್ರತಿ ತಿಂಗಳು ಕಾರ್ಯಕ್ರಮ: ಪ್ರತಿ ತಿಂಗಳು ವಾಲ್ಮಿಯಿಂದ ರೈತರಿಗೆ ಉಪಯುಕ್ತವಾಗುವಂತಹ ಬೋಧನೆ, ತರಬೇತಿ, ಸಂಶೋಧನೆ, ಪ್ರಾತ್ಯಕ್ಷಿಕೆ, ತಾಂತ್ರಿಕ ಸಮಾಲೋಚನೆ, ಕ್ಷೇತ್ರ ಭೇಟಿ, ಕಾರ್ಯಾಗಾರ, ವಿಚಾರ ಸಂಕಿರಣ, ಸಂವಾದ, ತಾಂತ್ರಿಕ ಸಹಯೋಗ ಸೇರಿದಂತೆ ಸಾವಿರಾರು ಹಲವು ಚಟುವಟಿಕೆಗಳಲ್ಲಿ ಕೈಗೊಂಡು ರೈತಸ್ನೇಹಿಯಾಗಿ ಮುನ್ನಡೆಯುತ್ತಿದೆ.

ಮಣ್ಣು ಮತ್ತು ನೀರಿನ ರಕ್ಷಣೆ ಅದರ ಬಳಕೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಮೂಲ ಉದ್ದೇಶವಾಗಿದೆ. ವಾಲ್ಮಿ ಮೂಲಕ ಆರೂ ಅಚ್ಚುಕಟ್ಟು ಪ್ರದೇಶಗಳಲ್ಲಿ ನಿರಂತರವಾಗಿ ರೈತರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಲ ಮತ್ತು ನಿರ್ವಹಣೆ ಸಂಸ್ಥೆ(ವಾಲ್ಮಿ) ನಿರ್ದೇಶಕರಾದ ಡಾ. ಗಿರೀಶ ಎನ್‌. ಮರಡ್ಡಿ ಹೇಳಿದರು.

----

16ಎಚ್‌ಯುಬಿ50, 51

ಧಾರವಾಡ ಕೃಷಿಮೇಳದಲ್ಲಿ ವಾಲ್ಮಿ ನಿರ್ದೇಶಕ ಡಾ. ಗಿರೀಶ ಎನ್‌. ಮರಡ್ಡಿ ರೈತರಿಗೆ ಮಾಹಿತಿ ನೀಡಿದರು.

----

ಫೋಟೋ... ಡಾ. ಗಿರೀಶ ಎನ್‌. ಮರಡ್ಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಸಂರಕ್ಷಣೆಗೆ ಜನಾಂದೋಲನ ಅವಶ್ಯಕ: ಬಸವರಾಜ ಪಾಟೀಲ್
ದೇಶಕ್ಕೆ ಅನ್ನ ಕೊಡುವ ರೈತನನ್ನು ಗೌರವದಿಂದ ಕಾಣಿ