ಭಾನುವಳ್ಳಿಯಲ್ಲಿ ಪುತ್ಥಳಿ ವಿಚಾರದಲ್ಲಿ ಬಿಗುವಿನ ಸ್ಥಿತಿ , ಪಿಡಿಒ ವರ್ಗಾವಣೆಗೆ ನಾಯಕ ಸಮಾಜ ಆಗ್ರಹ
ಪುತ್ಥಳಿ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಕಳೆದ 12 ದಿನಗಳಿಂದ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜಿದ್ದಾಜಿದ್ದಿ ಮಧ್ಯೆ ಭಾನುವಾರ ಬೆಳಗ್ಗೆ ಧರಣಿ ಸ್ಥಳದಲ್ಲಿ ಇಡಲಾಗಿದ್ದ ಮಹರ್ಷಿ ವಾಲ್ಮೀಕಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ನಾಪತ್ತೆಯಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕ ಮಹಾದ್ವಾರದ ಬಳಿಯೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ ವಿಚಾರಕ್ಕೆ ಪರಿಶಿಷ್ಟ ಪಂಗಡದ ನಾಯಕ ಹಾಗೂ ಕುರುಬ ಸಮಾಜ ಬಾಂಧವರ ಮಧ್ಯೆ ವಾಗ್ವಾದ ನಡೆದು, ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳು, ಹಿರಿಯ ಪೊಲೀಸ ಅಧಿಕಾರಿಗಳು ಭೇಟಿ ನೀಡಿದ್ದರೂ ಪರಿಸ್ಥಿತಿ ತಿಳಿಗೊಂಡಿರಲಿಲ್ಲ.ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವಿಗೆ ಕಳೆದ 12 ದಿನದಿಂದಲೂ ನಾಯಕ ಸಮಾಜದವರು ಹಗಲು ರಾತ್ರಿ ಧರಣಿ ನಡೆಸಿದರು. ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೇ, ಮತ್ತೊಂದು ಸಮುದಾಯದವರ ಪರ ನಿಂತಿದ್ದಾರೆಂಬ ಅಸಮಾಧಾನ ಸಹಜವಾಗಿಯೇ ಇತ್ತು. ಗ್ರಾಪಂನಲ್ಲೂ ಅಧಿಕಾರಿ, ಸಿಬ್ಬಂದಿ ಮತ್ತೊಂದು ಸಮುದಾಯದವರಾಗಿದ್ದು, ಪುತ್ಥಳಿ ವಿಚಾರದಲ್ಲಿ ಗ್ರಾಮದ ಸಾಮರಸ್ಯ ಕದಡುತ್ತಿರುವ ಪಿಡಿಒ ಸೇರಿ ಅಧಿಕಾರಿ, ಸಿಬ್ಬಂದಿಗಳ ಬೇರೆಡೆಗೆ ವರ್ಗಾಯಿಸಬೇಕು ಎಂಬುದಾಗಿ ನಾಯಕ ಸಮಾಜದ ಮುಖಂಡರು ಧರಣಿ ಸ್ಥಳದಲ್ಲಿ ಘೋಷಣೆ ಕೂಗಿದರು.
ನಮ್ಮ ಹಕ್ಕು, ನ್ಯಾಯ ಕೇಳಲು ಹೋದವರ ಮೇಲೆಯೇ ಐಸಿಪಿ ಸೆಕ್ಷನ್ 107ನಡಿ ಪ್ರಕರಣ ದಾಖಲಿಸುವ ಬೆದರಿಕೆಯನ್ನು ಪೊಲೀಸ್ ಇಲಾಖೆ ಹಾಕುತ್ತದೆ. ನಾಯಕ ಸಮಾಜದ ಮಹಿಳೆಯರ ಬಗ್ಗೆ ಕೆಲವು ಗೂಂಡಾಗಳು ಅಸಭ್ಯವಾಗಿ, ಕೇವಲವಾಗಿ ಮಾತನಾಡಿ, ಗೇಲಿ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್, ಜಿಲ್ಲಾಡಳಿತಕ್ಕಾಗಲೀ ಧೈರ್ಯವಿಲ್ಲವೇ? ಒಂದು ಜಾತಿ ವಿರುದ್ಧ ಮತ್ತೊಂದು ಜಾತಿ ಎತ್ತಿ ಕಟ್ಟುವ ಕೆಲಸ ಮಾಡುವುದು ಶೋಭೆಯಲ್ಲ ಎಂದು ಎಚ್ಚರಿಸಿದರು.
ಭಾವಚಿತ್ರ ಕಣ್ಮರೆ ಬಗ್ಗೆ ದೂರು ನೀಡುವೆವು