ಕನ್ನಡಪ್ರಭ ವಾರ್ತೆ ಮಡಿಕೇರಿ
ದಿಡ್ಡಳ್ಳಿ ಹೋರಾಟಗಾರ್ತಿ ಜೆ.ಮುತ್ತಮ್ಮ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬುಡಕಟ್ಟು ಜನಾಂಗದಿಂದ ಸಮಾಜದ ಮುನ್ನೆಲೆಗೆ ಬಂದು, ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲು ಹೋರಾಟ ಮಾಡಿ ಯಶಸ್ಸು ಗಳಿಸಿದ, ಕೊಡಗಿನ ವಿರಾಜಪೇಟೆ ಕ್ಷೇತ್ರದ ಜೆ.ಕೆ ಮುತ್ತಮ್ಮರವರಿಗೆ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಸಚಿವರು, ಶಾಸಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉಪಸ್ಥಿತರಿದ್ದರು.---------------------------------------------
"ದುರ್ಬಲ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದ ಮುತ್ತಮ್ಮ "ಮಡಿಕೇರಿ: ರಾಜ್ಯ ಸರ್ಕಾರದಿಂದ ನೀಡಲಾಗುವ ವಾಲ್ಮೀಕಿ ಪ್ರಶಸ್ತಿ ಈ ಬಾರಿ ಸಂಘಟನಾ ಕ್ಷೇತ್ರಕ್ಕೆ ಕೊಡಗಿನ ಜಿ.ಕೆ ಮುತ್ತಮ್ಮ ಅವರಿಗೆ ನೀಡಲಾಗಿದೆ.ಸೂರಿಲ್ಲದವರಿಗೆ ಸೂರು ಕೊಡಿಸುವ ಬಗ್ಗೆ ಈ ಹಿಂದೆ ದಿಡ್ಡಳ್ಳಿ ಜನರ ಪುನರ್ವಸತಿ ಕೇಂದ್ರಕ್ಕಾಗಿ ತೀವ್ರ ಸ್ವರೂಪದ ಹೋರಾಟವನ್ನು ಮಾಡಿದ್ದರು.
ಅಂದಿನ ಸರ್ಕಾರ ಇವರ ನಡೆಗೆ ಮಣಿದು ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭಿಸಿ ನಿರಾಶ್ರಿತರಿಗೆ ಸಂಪೂರ್ಣ ಸವಲತ್ತು ಇರುವ ನಿವೇಶನ ಹಾಗೂ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಜಿ ಕೆ ಮುತ್ತಮ್ಮ ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು, ದುರ್ಬಲ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ.ಇವರ ಸಂಘಟನಾ ಚಾತುರ್ಯಕ್ಕಾಗಿ ಈ ಬಾರಿ ಇವರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.