ವಾಲ್ಮೀಕಿ ಸಾಧನೆ ಎಲ್ಲರಿಗೂ ಪ್ರೇರಣೆ: ರವಿರಾಜ ಅಂಕೋಲೆಕರ

KannadaprabhaNewsNetwork |  
Published : Oct 08, 2025, 01:01 AM IST
ಸನ್ಮಾನಿಸಲಾಯಿತು  | Kannada Prabha

ಸಾರಾಂಶ

ರಾಮಾಯಣ ಮಹಾಕಾವ್ಯ ರಚಿಸಿದ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು.

ಕನ್ನಡಪ್ರಭ ವಾರ್ತೆ ಕಾರವಾರ

ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಮಹಾಕಾವ್ಯದಲ್ಲಿ ಇಡೀ ವಿಶ್ವಕ್ಕೆ ಅನ್ವಯವಾಗುವಂತಹ ಆದರ್ಶ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವ ತತ್ವಗಳು ಇದ್ದು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಈ ತತ್ವ ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.

ಮಂಗಳವಾರ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿರುವ ದುರ್ಗುಣಗಳನ್ನು ತ್ಯಜಿಸಿ, ತನ್ನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಎಂಬುದಕ್ಕೆ ವಾಲ್ಮೀಕಿ ಅವರೇ ಮಾದರಿ ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಉದ್ಘಾಟಿಸಿ, ಸತತ ಪ್ರಯತ್ನದಿಂದ ಅಸಾಮಾನ್ಯ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರೇ ಸಾಕ್ಷಿ. ಬೇಡನಾಗಿದ್ದು ನಿರಂತರ ತಪಸ್ಸಿನಿಂದ ಮಹರ್ಷಿಯಾಗಿ ಬದಲಾಗಿ, ರಾಮಾಯಣ ಮಹಾಕಾವ್ಯ ರಚಿಸಿದ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಮೂಲಕ ಜೀವನದಲ್ಲಿ ಪಾಲಿಸಬೇಕಾದ ಎಲ್ಲಾ ಮೌಲ್ಯಗಳ ಬಗ್ಗೆ ತಿಳಿಸಿದ್ದು, ಇದು ಎಲ್ಲರಿಗೂ ಸ್ಪೂರ್ತಿಯಾಗಬೇಕು ಮತ್ತು ಈ ಕೃತಿಯಲ್ಲಿನ ತತ್ವಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದರು.

ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಚಂದ್ರಶೇಖರ ನಾಯಕ ದೊರೆ, ಹಿಂದುಳಿದ ಬೇಡ ಜನಾಂಗದ ರತ್ನಾಕರ ನಾರದ ಮಹರ್ಷಿಗಳ ಸೂಚನೆಯಂತೆ ತನ್ನ ದೀರ್ಘ ತಪಸ್ಸಿನ ಮೂಲಕ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡು ದೇಶದ ಆದಿಕಾವ್ಯ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿದ್ದು ಮಹಾನ್ ಸಾಧನೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತರಬೇತಿ ನಿರತ

ಐಎಎಸ್ ಅಧಿಕಾರಿ ಝೂಪಿಶಾನ್ ಹಕ್, ಜಿಪಂ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಸದಸ್ಯರಾದ ಹನುಮಂತ ತಳವಾರ್, ರೋಶನಿ ಮಾಲಸೇಕರ್, ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗರಾಜ್ ತಳವಾರ್, ಪ.ವರ್ಗದ ವಿವಿಧ ಸಂಘಟನೆಗಳ ಮುಖಂಡರಾದ ಗಣೇಶ್ ಬಿಸ್ಟಣ್ಣವರ್, ದೀಪಕ್ ಕುಡಾಲ್ಕರ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಸ್ವೀಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ.ವರ್ಗದ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಅಭಿನಂದಿಸಲಾಯಿತು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮೆರವಣಿಗೆ ಕಾರ್ಯಕ್ರಮ ನಡೆಯಿತು.

ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ