ಕುಮಟಾ: ಜಗತ್ತಿನಲ್ಲಿ ಇನ್ಯಾವುದೇ ಗ್ರಂಥ ತೋರಿಸದ ಜೀವನ ಮೌಲ್ಯಗಳನ್ನು ಭಗವದ್ಗೀತೆ ನೀಡಿದೆ. ಭಗವದ್ಗೀತೆಯಲ್ಲಿ ಭಕ್ತಿ, ಕರ್ಮ, ಜ್ಞಾನ, ಯೋಗ ಸಿದ್ಧಾಂತ ಅಡಕವಾಗಿದೆ. ಗೀತೆಯ ಅಧ್ಯಯನದಿಂದ ಜ್ಞಾನವೃದ್ಧಿ, ಸತ್ಯದ ಅರಿವು ಹಾಗೂ ನಿಸ್ವಾರ್ಥ ಪ್ರಾಮಾಣಿಕತೆಯ ಮಹತ್ವದ ದರ್ಶನವಾಗುತ್ತದೆ ತಾಪಂ ಇಒ ರಾಜೇಂದ್ರ ಭಟ್ಟ ತಿಳಿಸಿದರು.ತಾಲೂಕಿನ ಸಿವಿಎಸ್‌ಕೆ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಬ್ರಹ್ಮಾಂಡದ ರಹಸ್ಯ ಅರಿಯಲಾಗದಿದ್ದರೂ ಅಗೋಚರ ಶಕ್ತಿಯ ಅರಿವು ನಮಗಿದೆ. ಸತ್ಯದ ಶೋಧನೆ ಭಗವದ್ಗೀತೆಯಲ್ಲಿದೆ. ಜ್ಞಾನಕ್ಕಿಂತ ಮಿಗಿಲಾದ ಪರಿಶುದ್ಧವಾದ ವಸ್ತು ಈ ಪ್ರಪಂಚದಲ್ಲಿ ಬೇರೆ ಇಲ್ಲ. ಅಂತರಂಗ ಬಹಿರಂಗ ಶುದ್ಧಗೊಳಿಸುವ ಭಗವದ್ಗೀತೆಯನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಿ. ಅದು ಅರ್ಥವನ್ನು ತನ್ನಿಂದತಾನೇ ಕಲಿಸುತ್ತದೆ ಎಂದರು.ಭಗವದ್ಗೀತಾ ಸಮಿತಿಯ ಜಿಲ್ಲಾಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಭಗವದ್ಗೀತೆಯು ಸಾರ್ವಕಾಲಿಕ ಶಕ್ತಿ ಮತ್ತು ವಿವೇಕದ ಮೂಲ. ಗೀತೆಯು ಕೇವಲ ಪವಿತ್ರ ಗ್ರಂಥವಲ್ಲ, ಮಾನವ ಕುಲಕ್ಕೆ ಶಾಶ್ವತವಾಗಿ ಸಂದೇಶದ ಸಜೀವ ಧ್ವನಿಯಾಗಿದೆ. ಬಲ, ಸ್ಫೂರ್ತಿ, ಧರ್ಮಮಾರ್ಗ, ಸದಾಚಾರ ಮತ್ತು ಅಧರ್ಮದ ವಿರೋಧ, ಗೊಂದಲ ನಿವಾರಣೆಗೆ ಮಾರ್ಗದರ್ಶನವಿದೆ. ನಮ್ಮ ಎಲ್ಲ ಸಮಸ್ಯೆಯ ಪರಿಹಾರಕ್ಕೆ ಭಗವದ್ಗೀತೆ ಅಧ್ಯಯನವೊಂದೇ ಸಾಕು ಎಂದರು.ಭಗವದ್ಗೀತಾ ಸಮಿತಿಯ ತಾಲೂಕಾ ಅಧ್ಯಕ್ಷ ಎಂ.ಆರ್. ಉಪಾಧ್ಯಾಯ ಮಾತನಾಡಿ, ವಿದ್ಯಾರ್ಥಿಗಳು ಅಯೋಮಯವಾದ ಮನಸ್ಥಿತಿಯಿಂದ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಗವದ್ಗೀತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದರು.ಸಮಿತಿಯ ಸಂಚಾಲಕ ಆನಂದು ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಭಟ್ಟ ಒಂಬತ್ತನೇ ಅಧ್ಯಾಯವನ್ನು ಬೋಧಿಸಿದರು. ಗೀತಾ ಅಭಿಯಾನ ಸಮಿತಿಯ ಉಪಾಧ್ಯಕ್ಷೆ ಸುಧಾ ಶಾನಭಾಗ, ಮುಖ್ಯಶಿಕ್ಷಕಿ ಸುಮಾ ಪ್ರಭು ಇದ್ದರು. ಮುಖ್ಯಶಿಕ್ಷಕ ಗಣೇಶ ಜೋಶಿ ವಂದಿಸಿದರು. ಆದರ್ಶ ರೇವಣಕರ ನಿರೂಪಿಸಿದರು.
ಭುವನಗಿರಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರೀ ದೇವಿಯ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಜರುಗಿದ ಮಾತೃವಂದನಾ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿಗೆ ಪ್ರಥಮದಿಂದ ಐದು ಸ್ಥಾನ ಪಡೆದ ವರ್ಷಾ ಮಡ್ಲೂರು, ನಾಗಶ್ರೀ ಗೌಡ, ಸಿಂಚನಾ ಹೆಗಡೆ, ದಿಶಾ ಶಾನಭಾಗ, ಎನ್.ಎಸ್. ಸಾಧನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಅವಲಕ್ಕಿಯ ಮೇಲೆ ರಾಷ್ಟ್ರಗೀತೆಯನ್ನು ಬರೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾದ ತಾಲೂಕಿನ ಮುಗ್ದೂರಿನ ಪ್ರತಿಭಾವಂತ ಯುವತಿ ಶ್ರೀರಕ್ಷಾ ರವಿಶಂಕರ ಹೆಗಡೆ ಮುಗ್ದೂರು ಅವರನ್ನು ಶ್ರೀ ಸೇವಾ ಸಂಕಲ್ಪ ಟ್ರಸ್ಟಿನ ಪರವಾಗಿ ಪಿ.ಬಿ. ಹೊಸೂರ ಗೌರವಿಸಿದರು.ತಹಸೀಲ್ದಾರ್ ಮಧುಸೂದನ ಆರ್. ಕುಲಕರ್ಣಿ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ದೇವರಾಜ ಹಿತ್ತಲಕೊಪ್ಪ, ಪುರಸ್ಕಾರದ ಪ್ರಾಯೋಜಕತ್ವ ವಹಿಸಿದ್ದ ರಾಜ್ಯಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ವಿಶ್ರಾಂತ ಮುಖ್ಯಾಧ್ಯಾಪಕ ಆರ್.ಎಸ್. ಹೆಗಡೆ, ಭುವನಗಿರಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ, ಮಾತೃವಂದನಾ ಸಮಿತಿ ಗೌರವ ಸಲಹೆಗಾರ ಎ.ಪಿ. ಭಟ್ಟ ಮುತ್ತಿಗೆ, ಕಾರ್ಯಾಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಇತರರು ಉಪಸ್ಥಿತರಿದ್ದರು.