ಕೊಪ್ಪಳ: ತಾಲೂಕಿನ ಕುಟಗನಹಳ್ಳಿಯಲ್ಲಿ ಸೋಮವಾರ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಜನರು, ಮೃಗಶಿರ ಮಳೆ ಕೂಡುವ ನಕ್ಷತ್ರದಲ್ಲಿ ಸೇವಿಸುವ ಅಸ್ತಮಾ ಔಷಧ ಪಡೆದರು.
ಗ್ರಾಮದ ಅಶೋಕರಾವ್ ಕುಲಕರ್ಣಿ ಕುಟುಂಬವು ತಲೆ ತಲೆಮಾರುಗಳಿಂದಲೂ ಅಸ್ತಮಾ ರೋಗಕ್ಕೆ ಔಷಧಿ ವಿತರಣೆ ಮಾಡುತ್ತಾ ಬಂದಿದೆ. ಆ ಪರಂಪರೆಯು ಈಗಲೂ ಮುನ್ನಡೆಸಲಾಗುತ್ತದೆ. ಇಲ್ಲಿ ಔಷಧಿ ಸೇವನೆ ಮಾಡಿದರೆ ಅಸ್ತಮಾ ರೋಗವು ನಿವಾರಣೆಯಾಗಲಿದೆ ಎನ್ನುವುದು ಈ ಭಾಗದ ಜನರಲ್ಲಿನ ನಂಬಿಕೆ. ಅದೂ ಮೃಗಶಿರ ಮಳೆ ಕೂಡುವ ವೇಳೆಗೆ ಔಷಧಿ ಸೇವಿಸಿದರೆ ರೋಗ ವಾಸಿ ಪಕ್ಕಾ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಪ್ರತಿ ವರ್ಷವೂ ಕುಟಗನಹಳ್ಳಿ ಗ್ರಾಮಕ್ಕೆ ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.ಅಶೋಕರಾವ್ ಕುಲಕರ್ಣಿ ಕುಟುಂಬವು ಔಷಧಿ ತಯಾರಿಸಲು ತಿಂಗಳು ಮುಂಚಿತವೇ ಗ್ರಾಮ ಸುತ್ತಲಿನ ಗುಡ್ಡಗಳಲ್ಲಿ ಕಾಡು ಗಿಡಮೂಲಿಕೆಗಳ ಎಲೆಗಳನ್ನು ತಂದು ಅವುಗಳನ್ನು ಒಣಗಿಸಿ ಪುಡಿ ಮಾಡಿ, ಬೆಲ್ಲ ಮಿಶ್ರಿತ ಮಾಡಿ ಗುಳಿಗೆ ಆಕಾರದಲ್ಲಿ ಸಿದ್ಧಪಡಿಸಲಾಗುತ್ತದೆ. ಮೃಗಶಿರ ಮಳೆ ಕೂಡುವ ವೇಳೆಗೆ ಮನೆಯಲ್ಲಿ ಪೂಜೆ ನೆರವೇರಿಸಿ ಎಲ್ಲರಿಗೂ ಔಷಧಿ ವಿತರಣೆ ಮಾಡಲಾಗುತ್ತದೆ. ನಂತರ ಗಂಟೆ ಬಾರಿಸಿದ ಬಳಿಕ ಔಷಧಿ ಸೇವನೆಗೆ ಚಾಲನೆ ನೀಡಲಾಗುತ್ತದೆ.
ಈ ಔಷಧಿ ಸೇವನೆ ಮಾಡುವ ಸಲುವಾಗಿಯೇ ನಾಡಿನಾದ್ಯಂತ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯ ಜನರು ಒಂದು ದಿನ ಮೊದಲೇ ಆಗಮಿಸಿ ಗ್ರಾಮದ ಬಯಲು ಪ್ರದೇಶದಲ್ಲಿ ಠಿಕಾಣಿ ಹೂಡಿದ್ದರು. ಇನ್ನು ಕೆಲವರು ಸೋಮವಾರ ಆಗಮಿಸಿ ಔಷಧಿ ವಿತರಣೆಗೆ ಕಾದು ಕುಳಿತಿದ್ದರು. ಪ್ರತಿ ವರ್ಷವೂ ಜನರ ಬರುವಿಕೆ ನಿರೀಕ್ಷೆಯ ಹಿನ್ನೆಲೆಯಲ್ಲಿ ಪೊಲೀಸರು ಭದ್ರತಾ ವ್ಯವಸ್ಥೆ ಕಲ್ಪಿಸುವ ಜತೆಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.ಪೊಲೀಸರು, ಸ್ವಯಂ ಸೇವಕರು ಸೇರಿದಂತೆ ಗ್ರಾಮದ ನಿವಾಸಿಗಳು ಪ್ರತಿಯೊಬ್ಬರಿಗೂ ಅಸ್ತಮಾ ರೋಗಕ್ಕೆ ಔಷಧಿ ವಿತರಣೆ ಮಾಡಿದರು.
ಯಲಬುರ್ಗಾ ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಸೋಮವಾರ ಪ್ರತಿವರ್ಷದಂತೆ ಮೃಗಶಿರ ಮಳೆ ಪ್ರವೇಶದ ಸಂದರ್ಭದಲ್ಲಿ ಅಸ್ತಮಾ ರೋಗಿಗಳಿಗೆ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಉಚಿತವಾಗಿ ಔಷಧಿ ವಿತರಿಸಿದರು.ಸಹಸ್ರಾರು ಸಂಖ್ಯೆಯ ಜನರು ಔಷಧಿ ಸೇವನೆ ಮಾಡಿದರು. ಬಳಿಕ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಂಸ್ಥಾನ ಹಿರೇಮಠದಿಂದ ಹಲವು ದಶಕಗಳಿಂದ ದಮ್ಮು, ಕೆಮ್ಮು ಮತ್ತು ಅಸ್ತಮಾ ರೋಗಿಗಳಿಗೆ ಗಿಡಮೂಲಿಕೆಯಿಂದ ಸಿದ್ಧಪಡಿಸಿದ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡುತ್ತಾ ಬರಲಾಗಿದೆ. ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಔಷಧಿಯ ಸದುಪಯೋಗ ಪಡಿಸಿಕೊಳ್ಳುತ್ತಾರೆ. ಗುಣಮುಖರಾದವರೂ ಇದ್ದಾರೆ ಎಂದರು.ದಮ್ಮು, ಕೆಮ್ಮು, ಅಸ್ತಮಾದಿಂದ ಬಳಲುವವರು ಜಿಲ್ಲೆ, ಹೊರಜಿಲ್ಲೆ ಹಾಗೂ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ೪೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.