ಬೆಂಗಳೂರಿನಿಂದ ಕೊಪ್ಪಳಕ್ಕೆ ವಂದೇ ಭಾರತ ರೈಲು ಶೀಘ್ರ

KannadaprabhaNewsNetwork |  
Published : May 26, 2025, 12:50 AM ISTUpdated : May 26, 2025, 11:38 AM IST
ಸಸಸಸಸ | Kannada Prabha

ಸಾರಾಂಶ

ಕೊಪ್ಪಳ ಹಾಗೂ ಹೊಸಪೇಟೆ ಪ್ರವಾಸೋದ್ಯಮದಲ್ಲಿ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಕೊಪ್ಪಳದ ಶಕ್ತಿ ಪೀಠ ಶ್ರೀ ಹುಲಿಗಮ್ಮ ದೇವಸ್ಥಾನಕ್ಕೆ ದೇಶದ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ಮುನಿರಾಬಾದ್: ಬೆಂಗಳೂರಿನಿಂದ ಕೊಪ್ಪಳಕ್ಕೆ ವಂದೇ ಭಾರತ ರೈಲು ಶೀಘ್ರದಲ್ಲೇ ಓಡಾಡುವ ಎಲ್ಲ ಲಕ್ಷಣಗಳಿವೆ. ಸಹಕಾರ ಭಾರತಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ರಮೇಶ್ ವೈದ್ಯ ಈ ಮಾಹಿತಿ ಖಚಿತಪಡಿಸಿದರು.

ಕೊಪ್ಪಳ ಹಾಗೂ ಹೊಸಪೇಟೆ ಪ್ರವಾಸೋದ್ಯಮದಲ್ಲಿ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಕೊಪ್ಪಳದ ಶಕ್ತಿ ಪೀಠ ಶ್ರೀ ಹುಲಿಗಮ್ಮ ದೇವಸ್ಥಾನಕ್ಕೆ ದೇಶದ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಅಲ್ಲದೆ ಹನುಮನ ಜನ್ಮಸ್ಥಳ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ವಾರಾಂತ್ಯದಲ್ಲಿ 20ರಿಂದ 25 ಸಾವಿರ ಪ್ರವಾಸಿಗರು ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಿಂದ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಈ ಎಲ್ಲ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬೆಂಗಳೂರಿನಿಂದ ಕೊಪ್ಪಳಕ್ಕೆ ವಂದೇ ಭಾರತ ರೈಲು ಓಡಿಸುವುದು ಅಗತ್ಯವಾಗಿದೆ ಎಂದು ವಿವರಿಸಿದರು.

ಪ್ರವಾಸಿಗರು ಉತ್ತರ ಭಾರತದಿಂದ ಬೆಂಗಳೂರು ವರೆಗೆ ವಿಮಾನದಲ್ಲಿ ಬಂದು ಅಲ್ಲಿಂದ ವಂದೇ ಭಾರತ್ ರೈಲಿನಲ್ಲಿ ಹೊಸಪೇಟೆ ಅಥವಾ ಕೊಪ್ಪಳದಲ್ಲಿ ಇಳಿದು ಅಲ್ಲಿಂದ ಅಂಜನಾದ್ರಿ ಪರ್ವತಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ತಾವು ಮೂರು ತಿಂಗಳಿಂದ ಪ್ರಯತ್ನ ನಡೆಸಿದ್ದು, ಈಗ ಅದು ಫಲಪ್ರದವಾಗುವ ಹಂತಕ್ಕೆ ಬಂದಿದೆ. ರೈಲ್ವೆ ಇಲಾಖೆಯಿಂದ ದೇಶದಲ್ಲಿ ಈಗ 50 ಹೊಸ ರೈಲುಗಳನ್ನು ಬಿಡಲು ನಿರ್ಧರಿಸಲಾಗಿದ್ದು, ಇದರ ಪೈಕಿ ಬೆಂಗಳೂರಿನಿಂದ ಕೊಪ್ಪಳಕ್ಕೆ ವಂದೇ ಭಾರತ ರೈಲು ಸೇರ್ಪಡೆಯಾಗಿದೆ ಎಂದರು.

ಈ ಹಿಂದೆ ನೂತನ ರೈಲು ಮಂಜೂರಾತಿ ಮಾಡಬೇಕಾದರೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಹೋಗುತ್ತಿತ್ತು. ಈಗ ನಿಯಮ ಕೊಂಚ ಮಾರ್ಪಾಡು ಮಾಡಲಾಗಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಿದ್ದಾರೆ. ಹೊಸ ರೈಲು ಬೇಕಾದರೆ ಆ ಪ್ರದೇಶದವರು ತಾಂತ್ರಿಕ ಸಮಿತಿಗೆ ಅರ್ಜಿ ಸಲ್ಲಿಸಬೇಕು. ತಾಂತ್ರಿಕ ಸಮಿತಿಯಿಂದ ಹಸಿರು ನಿಶಾನೆ ದೊರೆತ ನಂತರ ರೈಲ್ವೆ ಮಂಡಳಿಯು ಆ ಮಾರ್ಗಗಳಲ್ಲಿ ನೂತನ ರೈಲನ್ನು ಮಂಜೂರು ಮಾಡುತ್ತದೆ ಎಂದರು.

ತಾಂತ್ರಿಕ ಮಂಡಳಿಯು ಬೆಂಗಳೂರು ಹಾಗೂ ಕೊಪ್ಪಳ ನಗರಗಳ ನಡುವೆ ವಂದೇ ಭಾರತ್ ರೈಲನ್ನು ಓಡಿಸಲು ಹಸಿರು ನಿಶಾನೆ ತೋರಿಸಿದೆ. ಇನ್ನು ಮೂರು ತಿಂಗಳ ಒಳಗಾಗಿ ಈ ಮಾರ್ಗದಲ್ಲಿ ವಂದೇ ಭಾರತ ರೈಲು ಓಡಾಡಲಿದೆ ಎಂದು ರಮೇಶ್ ವೈದ್ಯ ತಿಳಿಸಿದ್ದಾರೆ.

PREV
Read more Articles on

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ