ವಂದೇ ಮಾತರಂ 2 ಚರಣಕ್ಕೆ ಸೀಮಿತ: ಬಿಜೆಪಿ ಅಕ್ರೋಶ

KannadaprabhaNewsNetwork |  
Published : Sep 16, 2026, 01:45 AM IST
ಪೋಟೊ: 15ಎಸ್ಎಂಜಿಕೆಪಿ03ಶಿವಮೊಗ್ಗ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.  | Kannada Prabha

ಸಾರಾಂಶ

Vande Mataram limited to two stanzas: BJP outraged

-ಸರ್ಕಾರದ ನಡೆ ವಿರುದ್ಧ ಬಿಜೆಪಿ ಜನಾಂದೋಲನ । ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರ ನ್ಯಾಯಾಲಯದಲ್ಲಿ ಪ್ರಶ್ನಿಸುವುದರ ಜತೆಗೆ ಸರ್ಕಾರದ ನಡೆಯ ವಿರುದ್ಧ ಬಿಜೆಪಿ ಜನಾಂದೋಲನ ರೂಪಿಸಲಿದೆ ಎಂದು ಶಾಸಕ ಎಸ್. ಎನ್ ಚನ್ನಬಸಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಾಗೂ ಸಂವಿಧಾನದ ಆಶಯಗಳನ್ನು ಸಂರಕ್ಷಿಸುವಲ್ಲಿ ನಡೆಯಬೇಕಾದ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದಲ್ಲೇ ಕಾನೂನು ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧದ ನಡೆ ನಡೆದಿದೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದರು.

ವಂದೇಮಾತರಂ ಗೀತೆಗೆ 150 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದ ಅವರು, ಈ ಸಂಬಂಧದ ಕಾನೂನು ಹಾಗೂ ನಿರ್ದೇಶನಗಳನ್ನು ಎಲ್ಲರೂ ಗೌರವಿಸಬೇಕು.

ರಾಷ್ಟ್ರಪತಿಗಳೂ ಇದಕ್ಕೆ ಅಂಕಿತ ಹಾಕಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ರೀತಿಯಲ್ಲಿ ವಿಭಿನ್ನ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ. ಅಧಿಕಾರ ಇದೆ ಎಂದ ಮಾತ್ರ ಏನ್ ಬೇಕಾದ್ರೂ ಮಾಡಬಹುದೇ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ಉಳಿಸಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದ ಸಂದರ್ಭದಲ್ಲೇ ವಂದೇಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲಾಗಿದೆ.

ಈ ಕುರಿತು ಪ್ರಶ್ನಿಸಿದಾಗ, ಸರ್ಕಾರದ ಆದೇಶವೇ ಹೀಗಿದೆ ಎಂಬ ಉತ್ತರ ನೀಡಲಾಗಿದೆ. ಹಾಗಾದರೆ ಕಾನೂನನ್ನು ಯಾರು ಪಾಲಿಸಬೇಕು? ಕಾನೂನಿನ ರಕ್ಷಣೆ ಮತ್ತು ಗೌರವವನ್ನು ಯಾರು ಮಾಡಬೇಕು? ದೇಶಕ್ಕೊಂದು ಕಾನೂನು, ರಾಜ್ಯಕ್ಕೊಂದು ಕಾನೂನು ಎನ್ನುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಸಾಧ್ಯವೇ? ಎಂದು ಪ್ರಶ್ನಿಸಿದರು.

ಸಂವಿಧಾನದ ಅಡಿಯಲ್ಲಿ ನಡೆವ ಸರ್ಕಾರವೇ ಕಾನೂನಿನ ಪಾಲನೆಯಲ್ಲಿ ದ್ವಂದ್ವ ನೀತಿ ಅನುಸರಿಸಬಾರದು. ಸರ್ಕಾರದ ಪ್ರಸ್ತಾವನೆ, ಕ್ಯಾಬಿನೆಟ್ ನಿರ್ಧಾರ ಹಾಗೂ ಪಕ್ಷದ ರಾಜಕೀಯ ನಿಲುವುಗಳನ್ನು ಸರ್ಕಾರಿ ಕಾರ್ಯಕ್ರಮಗಳೊಂದಿಗೆ ಬೆರೆಸಬಾರದು. ಪ್ರಜಾಪ್ರಭುತ್ವ ಉಳಿಸುವ ಹೆಸರಿನಲ್ಲಿ ನಡೆವ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷದ ನೀತಿ- ನಿಯಮಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ವಂದೇಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದ ಗೀತೆಯಾಗಿದ್ದು, ೧೫೦ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಅದಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದರೆ, ರಾಜ್ಯ ಸರ್ಕಾರದ ನಡೆ ಕಾನೂನಿನ ಮೇಲಿನ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ದೂರಿದರು.

ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವತೆಗಳ ಆರಾಧನೆ, ಸಾಂಸ್ಕೃತಿಕ ಆಚರಣೆಗಳಿಗೆ ಗೌರವ ನೀಡುವ ಸರ್ಕಾರಕ್ಕೆ ವಂದೇಮಾತರಂನಂತಹ ರಾಷ್ಟ್ರೀಯ ಭಾವನೆಯೊಂದಿಗೆ ಬೆಸೆದುಕೊಂಡಿರುವ ಗೀತೆಗೆ ಗೌರವ ಸಲ್ಲಿಸುವ ವಿಚಾರದಲ್ಲಿ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸಿ, ಸಂವಿಧಾನವನ್ನು ಗೌರವಿಸಿ ಎಂದು ಹೇಳುವ ದಿನವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ನಡೆಯಬಾರದು. ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಗುಡುಗಿದರು.

ಈ ವಿಚಾರವನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪಿಸಿ, ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಅಗತ್ಯವಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಬೀದಿ ಹೋರಾಟದ ಜತೆಗೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಅವರು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್ .ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ದೀನ ದಯಾಳ್, ಮಂಜುನಾಥ್ ನವುಲೆ, ಸುರೇಖಾ ಮುರುಳಿಧರ್, ಯಶೋದಾ, ಪ್ರಭಾಕರ್, ಕುಮಾರ್, ಪರಮೇಶ್ವರ್ ನಾಯ್ಕ್, ಶ್ರೀನಾಗ್ ಇದ್ದರು.

ಪೋಟೊ: 15ಎಸ್ಎಂಜಿಕೆಪಿ03

ಶಿವಮೊಗ್ಗ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಡು ರಸ್ತೆಯಲ್ಲೇ ಗಣೇಶಮೂರ್ತಿ ಇಟ್ಟು ಯುವಕರ ಪ್ರತಿಭಟನೆ
ವಿಜೃಂಭಣೆಯಿಂದ ನಡೆದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವ