ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ವಂದೇ ಮಾತರಂ ಸೇವಾ ಟ್ರಸ್ಟ್ ನಿಂದ ಅಭಿಯಾನ

KannadaprabhaNewsNetwork |  
Published : Jun 03, 2025, 12:21 AM IST
2ಎಚ್ಎಸ್ಎನ್‌14 :  | Kannada Prabha

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವಂಥ ಎಲ್ಲಾ ನೌಕರರು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಶಿಕ್ಷಕ- ಶಿಕ್ಷಕಿಯರು ಮಕ್ಕಳಿಗೆ ಖಾಸಗಿ ಶಾಲೆಯಂತೆ ಗುಣಮಟ್ಟದ ಶಿಕ್ಷಣ ನೀಡುವಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯು ಮಕ್ಕಳಿಗೆ ಅತ್ಯುತ್ತಮ ಕೊಠಡಿಗಳನ್ನು ಹಾಗೂ ಶೌಚಾಲಯ ಹಾಗೂ ಮಕ್ಕಳಿಗೆ ಅಗತ್ಯವಿರುವಂತಹ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಅಭಿಯಾನದಲ್ಲಿ ವಂದೇ ಮಾತರಂ ಸೇವಾ ಟ್ರಸ್ಟ್ ಹಾಗೂ ಯುವ ಸಂಘ ಮಾತೃಭೂಮಿ ವೃದ್ಧಾಶ್ರಮದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಟ್ರಸ್ಟ್ ಸಂಸ್ಥಾಪಕ ನಾಗಣ್ಣ ಜೈ ಹಿಂದ್ ಮಾಧ್ಯಮದೊಂದಿಗೆ ಮಾತನಾಡಿ, ದಿನೇ ದಿನೇ ನಮ್ಮ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಕಡಿಮೆಯಾಗುತ್ತಿದ್ದು, ಕಲಿಯುವ ಮಕ್ಕಳಿಲ್ಲದೆ ಮುಚ್ಚುತ್ತಿವೆ. ವಿದ್ಯಾಭ್ಯಾಸ ಖಾಸಗೀಕರಣಗೊಳ್ಳುತ್ತಿದೆ, ಖಾಸಗಿ ಶಾಲೆಗಳಲ್ಲಿ ದುಡ್ಡಿದ್ದವರಿಗೆ ಮಾತ್ರ ವಿದ್ಯಾಭ್ಯಾಸ ಸಿಗುತ್ತಿದೆ, ಇತ್ತ ಮಕ್ಕಳಿಲ್ಲದೇ ಹಲವಾರು ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದೆ, ಆದ್ದರಿಂದ ಸರಕಾರವು ಈಗಲೇ ಎಚ್ಚೆತ್ತು ಕ್ರಮಕೈಗೊಳ್ಳದಿದ್ದಲ್ಲಿ ಶೀಘ್ರ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ, ಶಾಲೆಗಳನ್ನು ಉಳಿಸಿ ಬಡಮಕ್ಕಳಿಗೂ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡಬೇಕಾಗಿದೆ ಎಂದರು. ಸರ್ಕಾರದಿಂದ ಸಿಗುವಂಥ ಉಚಿತ ಸವಲತ್ತುಗಳು ಬೇಕು. ಆದರೆ ನಿಮ್ಮ ಮಕ್ಕಳಿಗೆ ಸರ್ಕಾರಿ ಶಾಲೆ ಬೇಡವೇ, ರಾಜ್ಯದ ಪ್ರತಿ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಸೂರಿನಡಿ, ಎಲ್.ಕೆ.ಜಿಯಿಂದ ೧೦ನೇ ತರಗತಿವರೆಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪ್ರಾರಂಭವಾಗಬೇಕು. ಸರ್ಕಾರದಿಂದ ಬಿಟ್ಟಿ ಭಾಗ್ಯಗಳಾದಂತಹ ಕುಟುಂಬದ ಸದಸ್ಯರಿಗೆ ಸಿಗುವ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು ೨೦೦೦ ರು. ಉಚಿತ ಪಡಿತರ ಅಕ್ಕಿ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಕುಟುಂಬದ ಪದವೀಧರರಿಗೆ ನಿರುದ್ಯೋಗಿ ಭತ್ಯೆ. ಈ ಎಲ್ಲಾ ಬಿಟ್ಟಿ ಸವಲತ್ತುಗಳನ್ನು ತೆಗೆದುಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ, ಖಾಸಗಿ ಶಾಲೆಗೆ ಸೇರಿಸುವಂತವರ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿಗೆ ಒಂದರಂತೆ ಇಂಗ್ಲಿಷ್ ಮತ್ತು ಕನ್ನಡ ವಸತಿ ಶಾಲೆ ಪ್ರಾರಂಭಿಸಿ, ಈ ಶಾಲೆಗಳಿಗೆ ಪರಿಣಿತ ಶಿಕ್ಷಕರನ್ನು ನೇಮಿಸಿ ಹಾಗೂ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ಸಿನ ವ್ಯವಸ್ಥೆ ಕಲ್ಪಿಸುವುದು. ಮೊದಲು ಸರ್ಕಾರದ ಅನ್ನ ತಿನ್ನುವಂತಹ ಪ್ರತಿಯೊಬ್ಬ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವಂತಾಗಲು ಸರ್ಕಾರ ಆದೇಶ ಮಾಡಬೇಕು, ಯಾರು ಸರ್ಕಾರಿ ಶಾಲೆಯಲ್ಲಿ ಓದಿಸುವುದಿಲ್ಲವೋ ಅಂತವರ ಮುಂಬಡ್ತಿ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವಂಥ ಎಲ್ಲಾ ನೌಕರರು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಶಿಕ್ಷಕ- ಶಿಕ್ಷಕಿಯರು ಮಕ್ಕಳಿಗೆ ಖಾಸಗಿ ಶಾಲೆಯಂತೆ ಗುಣಮಟ್ಟದ ಶಿಕ್ಷಣ ನೀಡುವಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯು ಮಕ್ಕಳಿಗೆ ಅತ್ಯುತ್ತಮ ಕೊಠಡಿಗಳನ್ನು ಹಾಗೂ ಶೌಚಾಲಯ ಹಾಗೂ ಮಕ್ಕಳಿಗೆ ಅಗತ್ಯವಿರುವಂತಹ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡಬೇಕು. ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸುಮಾರು ೪೨ ತರಹದ ಉಚಿತ ಸವಲತ್ತುಗಳನ್ನು ಜೊತೆಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಆಯಾ ಗ್ರಾಮಗಳ ಪೋಷಕರ ಗಮನಕ್ಕೆ ತಂದು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವೊಲಿಸಲು ಆಯಾ ಶಾಲಾ ಶಿಕ್ಷಕರು ಶ್ರಮವಹಿಸುವುದು. ನಮ್ಮ ರಾಜ್ಯದಲ್ಲಿ ಪ್ರಥಮವಾಗಿ ನಮ್ಮ ಮಾತೃಭಾಷೆಗೆ ಆದ್ಯತೆ ನೀಡಬೇಕು, ಏಕೆಂದರೆ ಮಾತೃಭಾಷೆಯಲ್ಲಿ ಕಲಿಯುವಷ್ಟು ಸುಲಭವಾಗಿ ಬೇರೆ ಭಾಷೆಯಲ್ಲಿ ಕಲಿಯುವುದು ಸುಲಭವಲ್ಲ ಹಾಗೂ ಎಲ್ಲಾ ತರಹದ ಜಾತಿವಾರು ವಿದ್ಯಾರ್ಥಿ ನಿಲಯಗಳನ್ನು ತೆಗೆದು ಹಾಕಿ ಸಾಮಾನ್ಯ ವಿದ್ಯಾರ್ಥಿ ನಿಲಯವಾಗಿ ಪರಿವರ್ತಿಸಿ, ಕಲಿಯುವ ಮಕ್ಕಳಲ್ಲಿ ಐಕ್ಯತೆಯ ಭಾವನೆ ಮೂಡಿಸಬೇಕು, ಜಾತೀಯತೆಯನ್ನು ತೊಲಗಿಸಬೇಕು ಎಂದು ಕೋರಿದರು.

ವಂದೇ ಮಾತರಂ ಸೇವಾ ಟ್ರಸ್ಟ್ ಕಾರ್ಯದರ್ಶಿ ವಿಕ್ರಂ ಜೈಹಿಂದ್, ಯುವ ಸಂಘದ ಪ್ರಧಾನ ಕಾರ್ಯದರ್ಶಿ ಸುಮಾ ವಿಕ್ರಂ, ರಂಗಭೂಮಿ ಕಲಾವಿದೆ ಲಕ್ಷ್ಮೀ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ