ಹಾವೇರಿ ಜಿಲ್ಲಾದ್ಯಂತ ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮ

KannadaprabhaNewsNetwork |  
Published : Aug 22, 2026, 01:45 AM IST
ಹಾವೇರಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಜಿಲ್ಲಾದ್ಯಂತ ವರ ಮಹಾಲಕ್ಷ್ಮೀ ಹಬ್ಬವನ್ನು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮನೆಮನೆಗಳಲ್ಲಿ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ಹಾವೇರಿ: ಜಿಲ್ಲಾದ್ಯಂತ ವರ ಮಹಾಲಕ್ಷ್ಮೀ ಹಬ್ಬವನ್ನು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮನೆಮನೆಗಳಲ್ಲಿ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಮನೆಯನ್ನು ಸಾರಿಸಿ, ಮನೆಯಂಗಳದಲ್ಲಿ ಬಣ್ಣಬಣ್ಣದ ರಂಗೋಲಿ ಚಿತ್ತಾರವನ್ನು ಬಿಡಿಸಿದ್ದರು. ಮನೆಯಲ್ಲಿಯೇ ಮಂಟಪವನ್ನು ತಯಾರಿಸಿ, ಮಾವಿನ ತೋರಣ, ಬಾಳೆಕಂಬ, ಹೂವಿನ ಮಾಲೆ, ಪೂರ್ಣಕುಂಭ, ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿದ್ಯುದ್ದೀಪ ಅಲಂಕಾರದಿಂದ ಮಂಟಪವನ್ನು ಸಿಂಗಾರಗೊಳಿಸಿದ್ದರು.

ಮನೆಗಳಲ್ಲಿ ಲಕ್ಷ್ಮೀ ಕೂರಿಸಲು ತಯಾರಿಸಿದ್ದ ಮಂಟಪದಲ್ಲಿ ಕಳಸ ಸ್ಥಾಪಿಸಿ, ಬಾಳೆಕಂಬ, ಮಾವು ಸೇರಿದಂತೆ ನಾನಾ ಪುಷ್ಪಗಳಿಂದ ದೇವಿಯನ್ನು ಅಲಂಕರಿಸಿದ್ದರು. ಬಗೆ ಬಗೆಯ ಒಡವೆಗಳಿಂದ ಸಿಂಗರಿಸಿ ಲಕ್ಷ್ಮೀದೇವಿಗೆ ಪ್ರಿಯವಾದ ಹೂವು, ಹಣ್ಣು ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ದೀಪ ದೂಪ ಹಚ್ಚಿ, ಭಕ್ಷ್ಯ ಭೋಜನ ತಯಾರಿಸಿ ನೈವೇದ್ಯ ಅರ್ಪಿಸಿ ದೇವಿಗೆ ಮಹಾ ಮಂಗಳಾರತಿ ನೆರವೇರಿಸಿದರು. ಸುಮಂಗಲೆಯರು, ಮಕ್ಕಳು ಸೇರಿದಂತೆ ಬಹುತೇಕರು ತಮ್ಮ ಕುಟುಂಬಕ್ಕೆ ಶ್ರೇಯಸ್ಸು ಸಿಗಲಿ ಎಂದು ವಿಶೇಷವಾಗಿ ಪ್ರಾರ್ಥಿಸಿದರು.

ನಂತರ ನೆರೆಹೊರೆಯ ಮುತ್ತೈದೆಯರನ್ನು ಕರೆದು ಹಿಂದೂ ಸಂಸ್ಕೃತಿ, ಸಂಪ್ರದಾಯದಂತೆ ಮಹಿಳೆಯರಿಗೆ ಅರಿಶಿಣ ಕುಂಕುಮ, ಎಲೆ, ಅಡಿಕೆ, ಹಣ್ಣು ನೀಡಿ ಉಡಿ ತುಂಬಲಾಯಿತು. ಕೆಲವೆಡೆ ಮಹಿಳೆಯರೆಲ್ಲ ಸೇರಿ ಲಕ್ಷ್ಮಿಯ ಕುರಿತು ಪದಗಳನ್ನು ಹಾಡಿದ್ದು ಪೂಜೆಗೆ ವಿಶೇಷ ಮೆರಗು ತಂದಿತು. ಅಕ್ಕಪಕ್ಕದ ಮನೆ ಮತ್ತು ಸಂಬಂಧಿಕರ ಮನೆಗಳಿಗೆ ಮಹಿಳೆಯರು ಪರಸ್ಪರ ತೆರಳಿ ಆತಿಥ್ಯ ಸ್ವೀಕರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಮುತ್ತೈದೆ ಮಹಿಳೆಯರಿಗೆ ಬಾಗಿನವನ್ನು ನೀಡಲಾಯಿತು.

ಗ್ರಾಮೀಣ ಭಾಗದಲ್ಲೂ ಮೆರಗು..

ಬರಗಾಲದ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆಗಳಲ್ಲಿ ಸಿಹಿ-ತಿಂಡಿ, ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಬಂಧು-ಬಳಗ ಹಾಗೂ ನೆರೆಹೊರೆಯವರಿಗೆ ಹಂಚಲಾಯಿತು. ಮಹಿಳೆಯರು ಹೊಸ ಸೀರೆ, ಆಭರಣ ಧರಿಸಿ ಸಂಭ್ರಮಿಸಿದರು. ವರಮಹಾಲಕ್ಷ್ಮಿ ವ್ರತವು ಕುಟುಂಬದ ಆರೋಗ್ಯ, ಐಶ್ವರ್ಯ, ಸಂತಾನ ಭಾಗ್ಯ ಹಾಗೂ ಮುತ್ತೈದೆ ಭಾಗ್ಯ ಕರುಣಿಸಲಿ ಎಂಬ ನಂಬಿಕೆಯಿಂದ ಆಚರಿಸಲಾಗುತ್ತದೆ. ಹೀಗಾಗಿ ಮಹಿಳೆಯರು ಶ್ರದ್ಧೆಯಿಂದ ವ್ರತ ಕೈಗೊಂಡು, ಲಕ್ಷ್ಮಿದೇವಿಯ ಆರಾಧನೆ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಗರದ ಬಹುತೇಕ ಬಡಾವಣೆಗಳಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರ ಓಡಾಟ ಕಂಡುಬಂದಿದ್ದು, ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಇನ್ನೂ ಕೆಲವೆಡೆ ಮನೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರು ಮಕ್ಕಳೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗದಲ್ಲಿ ಅಕ್ರಮವಾಗಿ ವಾಸವಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ವಶ
ಕೂಲಿ ಹಣಕ್ಕಾಗಿ ಗ್ರಾಪಂ ಎದುರು ಕಾರ್ಮಿಕರ ಪ್ರತಿಭಟನೆ