ವರದಾ ಬೇಡ್ತಿ ಜೋಡಣೆ: ಸಂಬಂಧಪಟ್ಟವರಿಗೆ ಮನವರಿಕೆ ಮಾಡಲಿ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Sep 11, 2025, 12:03 AM IST
10ಎಚ್‌ವಿಆರ್‌2 | Kannada Prabha

ಸಾರಾಂಶ

ನದಿ ನೀರು ವ್ಯರ್ಥವಾಗಿ ಹೋಗಬಾರದು. ಪ್ರವಾಹ ಉಂಟಾಗಿ ನೀರು ವ್ಯರ್ಥವಾಗಿ ಹೋಗಬಾರದು. ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನದಿ ವಿವಾದಗಳು, ಅಂತಾರಾಜ್ಯ ಜಲ ವಿವಾದಗಳು ಇದ್ದವು, ಈಗ ಅಂತರ್ ಜಿಲ್ಲಾ ನದಿ ವಿವಾದಗಳು ಶುರುವಾಗಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ: ವರದಾ -ಬೇಡ್ತಿ ನದಿ ಜೋಡಣೆ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡು ಉತ್ತರ ಕನ್ನಡ ಜಿಲ್ಲೆಯ ಜನರು ಹಾಗೂ ಸ್ವಾಮೀಜಿಗಳ ಜತೆಗೆ ಚರ್ಚೆ ಮಾಡಿ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಾ- ಬೇಡ್ತಿ ನದಿ ಜೋಡಣೆಯ ಬಗ್ಗೆ ನಾನು ಸಭೆ ಮಾಡಿದ ಮೇಲೆ ದೊಡ್ಡ ಪ್ರಮಾಣದ ಚರ್ಚೆ ನಡೆಯುತ್ತಿದೆ. ಉತ್ತರ ಕನ್ನಡದಲ್ಲಿಯೂ ಸಭೆ ನಡೆದಿದೆ. ರಾಜ್ಯದ ನೀರಿನ ಸಂಪತ್ತು ಸದುಪಯೋಗ ಆಗಬೇಕು. ಅದು ಎಲ್ಲಿ ಉಪಯೋಗ ಆಗಬೇಕು, ಅಲ್ಲಿ ಅದು ಬಳಕೆಯಾಗಬೇಕು ಎಂದರು.

ಮಹಾರಾಷ್ಟ್ರದಲ್ಲಿ ಹುಟ್ಟಿದ ಕೃಷ್ಣೆಗೆ ನಾವು ರಾಜ್ಯದಲ್ಲಿ ಯೋಜನೆ ಮಾಡಿದ್ದೇವೆ. ಕರ್ನಾಟಕದಲ್ಲಿ ಹುಟ್ಟಿರುವ ಕಾವೇರಿಗೆ ತಮಿಳುನಾಡಿನಲ್ಲಿ ಯೋಜನೆ ಮಾಡಿದ್ದಾರೆ. ನದಿ ನೀರು ವ್ಯರ್ಥವಾಗಿ ಹೋಗಬಾರದು. ಪ್ರವಾಹ ಉಂಟಾಗಿ ನೀರು ವ್ಯರ್ಥವಾಗಿ ಹೋಗಬಾರದು. ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನದಿ ವಿವಾದಗಳು, ಅಂತಾರಾಜ್ಯ ಜಲ ವಿವಾದಗಳು ಇದ್ದವು, ಈಗ ಅಂತರ್ ಜಿಲ್ಲಾ ನದಿ ವಿವಾದಗಳು ಶುರುವಾಗಿವೆ ಎಂದರು.ಪರಿಸರಕ್ಕೆ ಹಾನಿಯಿಲ್ಲ: ವರದಾ- ಬೇಡ್ತಿ ನದಿ ಜೋಡಣೆಗೆ ಮೊದಲು ಮಾಡಿದ್ದ ಡಿಪಿಆರ್‌ನಿಂದ ಬಹಳಷ್ಟು ಪರಿಸರಕ್ಕೆ ನಷ್ಟ ಆಗುತ್ತದೆ ಎಂದು ವಿರೋಧ ಮಾಡಿದ್ದರು. ಅದರಿಂದ ಮಾರ್ಪಾಡು ಮಾಡಿ ಯಾವುದೇ ರೀತಿಯ ನಷ್ಟ ಆಗದಂತೆ ಯೋಜನೆ ರೂಪಿಸಿದ್ದೇವೆ. ಇದನ್ನು ಉತ್ತರ ಕನ್ನಡದ ಜನರಿಗೆ ಮಾಹಿತಿ ಕೊಡುವ ಅಗತ್ಯವಿದೆ. ಅಲ್ಲಿಯ ಪೂಜ್ಯರ ಜತೆಗೆ ಮಾತನಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ಈ ಕೆಲಸ ಮಾಡಲಿ, ನಾವೂ ಅಲ್ಲಿಯ ಜನರ ಮನವೊಲಿಸಲು ಸಂಪೂರ್ಣ ಕೈಜೋಡಿಸುತ್ತೇವೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ. ರಾಜ್ಯ ಸರ್ಕಾರ ಡಿಪಿಆರ್‌ ಅನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಸೌಹಾರ್ದಯುತವಾಗಿ ಬಗೆಹರಿಸಿ ಯೋಜನೆ ರೂಪಿಸುವ ಉದ್ದೇಶ ಇದೆ. ಇದನ್ನು ಪ್ರತಿಷ್ಠೆ ಹಾಗೂ ರಾಜಕೀಯವಾಗಿ ನೋಡಬಾರದು ಎಂದರು.ಸರ್ಕಾರಕ್ಕೇನು ತೊಂದರೆ?: ಗಣೇಶೋತ್ಸವದಲ್ಲಿ ಡಿಜೆ ಹಚ್ಚಲು ಅಡ್ಡಿಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಎಸ್ಪಿ ಜತೆ ಮಾತನಾಡಿದಾಗ ಡಿಜೆ ಹಚ್ಚದಂತೆ ಸರ್ಕಾರದ ಸ್ಪಷ್ಟ ಆದೇಶ ಇರುವುದರಿಂದ ಡಿಜೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಎಲ್ಲ ಧರ್ಮದವರು ತಮ್ಮ ಧರ್ಮದ ಆಚರಣೆ ಮಾಡಲು ಸಂವಿಧಾನದಲ್ಲಿಯೇ ಅವಕಾಶ ಇದೆ. ಡಿಜೆ ಹಚ್ಚುವುದರಿಂದ ಯಾರಿಗೆ ಏನು ಸಮಸ್ಯೆ ಇದೆ. ಕೋರ್ಟ್‌ನವರು ಡಿಜೆ ಡೆಸಿಬಲ್ ಕಡಿಮೆ ಮಾಡಬೇಕು ಎಂದು ಹೇಳುತ್ತಾರೆ. ಆ ರೀತಿ ನೋಡಿಕೊಂಡರೆ ಡಿಜೆ ಹಾಕಲು ಯಾವುದೇ ತೊಂದರೆ ಇಲ್ಲ. ಈದ ಮಿಲಾದ್ ಶಾಂತಿಯುತವಾಗಿ ನಡೆಯಿತು. ಅದೇ ರೀತಿ ಗಣೇಶೋತ್ಸವ, ದೀಪಾವಳಿ ಶಾಂತ ರೀತಿಯಾಗಿ ನಡೆಯಲು ಸರ್ಕಾರ ಅವಕಾಶ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.ತಪ್ಪಿತಸ್ಥರ ಮೇಲೆ ಕ್ರಮ ಆಗಲಿ: ಈದ್ ಮಿಲಾದ್‌ನಲ್ಲಿ ಬೇರೆ ದೇಶಗಳ ಧ್ವಜ ಹಾರಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿಯ ಆರೋಪ ಕೇಳಿ ಬಂದಾಗ ಪೊಲೀಸರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಪೊಲೀಸರ ಮೇಲೆಯೇ ಕ್ರಮ ಕೈಗೊಳ್ಳುವ ಸಂದರ್ಭ ಬರುತ್ತದೆ. ಆದರೆ, ಇಲ್ಲಿ ಅಪರಾಧ ಮಾಡುವವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹೀಗಾಗಿ ಅವರು ಭಯವಿಲ್ಲದೇ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌