ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಾವಿರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಮಿಷಾಂಬ ದೇವಿಯ ದರ್ಶನ ಪಡೆದರು. ಬೆಂಗಳೂರಿನ ಧಾರ್ಮಿಕದತ್ತಿ ಇಲಾಖೆ ಆಯುಕ್ತ ಎಚ್. ಬಸವರಾಜೇಂದ್ರ, ಜಿಲ್ಲಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಹಾಗೂ ದೇವಾಲಯದ ಸಮಿತಿ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಅಮ್ಮನವರ ವರ್ಧಂತ್ಯುತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ನಡೆದವು, ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ, ದೇವಾಲಯಕ್ಕೆ ದೀಪಾಲಂಕಾರ ಇತರೆ ಸೇವೆಗಳು ನಡೆದವು.
ಶನಿವಾರ ಬೆಳಗ್ಗೆ 8ಗಂಟೆಗೆ ಮಹಾಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ, ಕಲಶ ಪೂಜೆಯಿಂದ ಪ್ರಾರಂಭಗೊಂಡು ನಿಮಿಷಾಂಬ ಹೋಮ ಪೂರ್ಣಾಹುತಿಯೊಂದಿಗೆ 121 ಕಲಶಗಳ ಮಹಾಭಿಷೇಕ, ಅಷ್ಟ ದಿಗ್ಬಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.ಈ ಬಾರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸೇರಿ ಅಧಿಕಾರಿ ವರ್ಗದವರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯ ಅನ್ನದಾನ , ಪ್ರಸಾದ ಕಾರ್ಯಕ್ರಮಗಳು, ಎಂದಿನಂತೆ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಸಂಜೆ 6-30ಕ್ಕೆ ದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ, ಮಹಾ ಆರತಿಯನ್ನು ನೆರವೇರಿಸಲಾಯಿತು.
ರಾಜ ಬೀದಿಯಲ್ಲಿ ಸಂಭ್ರಮದ ಉತ್ಸವ:
ಗಂಜಾಂ ಗ್ರಾಮದ ರಾಜ ಬೀದಿಯಲ್ಲಿ ಅಲಂಕೃತಗೊಂಡ ಬೆಳ್ಳಿ ಪಲ್ಲಕಿಯಲ್ಲಿ ಶ್ರೀನಿಮಿಷಾಂಬ ದೇವಿ ಉತ್ಸವ ಮೂರ್ತಿಯನ್ನು ವೈಭವಯುತವಾಗಿ ಮೆರವಣಿಗೆ ನಡೆಸಲಾಯಿತು.
ಗ್ರಾಮದ ನಾರಿಯರು ತಮ್ಮ ತಮ್ಮ ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಬಿಟ್ಟು ದೇವಿ ಮೆರವಣಿಗೆ ಬರುವುದನ್ನೇ ಕಾಯುತ್ತಿದ್ದರು. ಮೆರವಣಿಗೆಯಲ್ಲಿ ಬಂದ ದೇವಿಗೆ ಹಣ್ಣು, ಕಾಯಿ, ಆರತಿ ಮಾಡಿ ಭಕ್ತಿ- ಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗ್ರಾಮದ ಗ್ರಾಮಸ್ಥರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು , ಉನ್ನತ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.