ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವೇಣೂರಿನ ಶ್ರೀ ಭಗವಾನ್ ಗೋಮಟೇಶ್ವರ ಸ್ವಾಮಿಗೆ ಎರಡನೇ ದಿನವಾದ ಶುಕ್ರವಾರ ರಾತ್ರಿ ಮಹಾಮಜ್ಜನ ಅತ್ಯಂತ ವೈಭವದಿಂದ ನೆರವೇರಿತು.ದಿನದ ಸೇವಾಕರ್ತರಾದ ಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವೇಣೂರಿನ ವಿ. ಪ್ರವೀಣಕುಮಾರ್ ಇಂದ್ರ ಮತ್ತು ಕುಟುಂಬಸ್ಥರು 108 ಪವಿತ್ರ ಜಲದ ಕಲಶಾಭಿಷೇಕದ ಮೂಲಕ ಮಹಾ ಮಂಗಲಸ್ನಾನಕ್ಕೆ ಚಾಲನೆ ನೀಡಿದರು.
ಬಳಿಕ ಪಂಚಾಮೃತ, ಎಳನೀರು, ಕಬ್ಬಿನರಸ, ಕ್ಷೀರಾದಿಗಳಲ್ಲಿ ಮಿಂದೆದ್ದ ತ್ಯಾಗಮೂರ್ತಿಯನ್ನು ಅಕ್ಕಿಹಿಟ್ಟಿನಲ್ಲಿ ಕಂಗೊಳಿಸಲಾಯಿತು. ಚಂದನ, ಅರಸಿನ, ಶ್ರೀಗಂಧ, ಕಷಾಯ ಹಾಗೂ ಜಲಾಭಿಷೇಕದೊಂದಿಗೆ ಮಜ್ಜನದ ಪ್ರಕಾರಗಳನ್ನು ಶ್ರದ್ಧಾಭಕ್ತಿಯೊಂದಿಗೆ ನಡೆಸಲಾಯಿತು. ಮೊದಲೇ ಆಕರ್ಷಕವಾಗಿರುವ ಮಂಗಲಮೂರ್ತಿಯು ಅಭಿಷೇಕದಿಂದ ಇನ್ನಷ್ಟು ಸ್ಪುರದ್ರೂಪಿಯಾಗಿ ಕಂಗೊಳಿಸಿತು.ಅಂತಿಮವಾಗಿ ಹಾರ, ಮಹಾಮಂಗಳಾರತಿಯೊಂದಿಗೆ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ಸಾವಿರಾರು ಭಕ್ತರು ಪ್ರಾರಂಭದಿಂದ ಕೊನೆಯ ತನಕ ಭಕ್ತಿ ಗೀತೆ, ಜಯಘೋಷದೊಂದಿಗೆ ಅಭಿಷೇಕವನ್ನು ಕಣ್ತುಂಬಿಕೊಂಡರು.ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಹಿಂದೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳು ಅಡಕವಾಗಿವೆ. ಅಭಿಷೇಕಕ್ಕೆ ಬಳಸುವ ಪ್ರತಿಯೊಂದು ದ್ರವ್ಯ ಔಷಧಿ ಗುಣ ಹೊಂದಿವೆ.
ಪೂರ್ಣಕುಂಭಾಭಿಷೇಕವನ್ನು ಶಾಂತಿ ಮಂತ್ರದೊಂದಿಗೆ ಮಾಡಿದರೆ ಸಕಲ ಜೀವರಾಶಿಗೆ ಶುಭವಾಗುವುದು. ಅಭಿಷೇಕಕ್ಕೆ ಗಂಧವನ್ನು ಉಪಯೋಗಿಸುವುದರಿಂದ ಜೀವನ ಮಧುರವಾಗುತ್ತದೆ. ಕಷಾಯದಿಂದ ಅಭಿಷೇಕ ಮಾಡಿದರೆ ಜ್ವರ, ರೋಗ ಮತ್ತು ಸಂಸಾರದ ಜಂಜಾಟಗಳು ದೂರವಾಗುತ್ತವೆ. ಕಲ್ಕ ಚೂರ್ಣ ಜಿಗುಟನ್ನು ತೊಳೆದು ಹಾಕುತ್ತದೆ. ಹಾಲಿನ ಅಭಿಷೇಕ ಮಾಡುವುದರಿಂದ ನಮ್ಮ ಜೀವನ ಸುಮಧುರ ಹಾಗೂ ಶುಭ್ರವಾಗಿರುತ್ತದೆ. ಮೊಸರನ್ನು ಅಭಿಷೇಕಕ್ಕೆ ಬಳಸುವುದರಿಂದ ಹಿಮ ಶೀತಲ, ಶುಕ್ಲ ನಾಶವಾಗಿ ಕರ್ಮ ಕಳೆಯುತ್ತದೆ. ತುಪ್ಪದ ಅಭಿಷೇಕದಿಂದ ಕಾಂತಿ, ಬಲ, ಪುಷ್ಠಿ, ತೇಜಸ್ಸು ವೃದ್ಧಿಯಾಗುತ್ತದೆ. ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ ಕಾಮ ದೋಷಗಳು ನಿವಾರಣೆಯಾಗುತ್ತವೆ. ಎಳನೀರು ವಾತ,ಪಿತ್ತ, ಕಫ ದೋಷವನ್ನು ನಿವಾರಿಸುತ್ತದೆ.