ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನಾನಾ ಯೋಜನೆ

KannadaprabhaNewsNetwork | Published : Oct 6, 2024 1:26 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಡಾ.ಬಿ.ಆರ್.ಅಂಬೇಡ್ಕರ ನಿಜವಾದ ಶೋಷಿತ ಹಾಗೂ ಬಡ ಸಮಾಜಗಳ ಮಕ್ಕಳು ಶಿಕ್ಷಣವಂತರಾಗಲಿ ಎಂಬ ಉದ್ದೇಶದಿಂದ ಆಯಾ ಸಮಾಜಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಗ್ರಾಮೀಣ ಮಟ್ಟದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ವಸತಿ ನಿಲಯ ಸೇರಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಡಾ.ಬಿ.ಆರ್.ಅಂಬೇಡ್ಕರ ನಿಜವಾದ ಶೋಷಿತ ಹಾಗೂ ಬಡ ಸಮಾಜಗಳ ಮಕ್ಕಳು ಶಿಕ್ಷಣವಂತರಾಗಲಿ ಎಂಬ ಉದ್ದೇಶದಿಂದ ಆಯಾ ಸಮಾಜಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಗ್ರಾಮೀಣ ಮಟ್ಟದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ವಸತಿ ನಿಲಯ ಸೇರಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

ಪಟ್ಟಣದ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಎಸ್ಸಿ, ಎಸ್ಟಿ ಮೆಟ್ರಿಕ್‌ ನಂತರದ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಸತಿ ನಿಲಯದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಒಟ್ಟು 12 ಎಸ್ಸಿ ವಿದ್ಯಾರ್ಥಿಗಳ ವಸತಿ ನಿಲಯಗಳಿದ್ದು, 2008ರಲ್ಲಿ ಈ ವಸತಿ ನಿಲಯ ಮಂಜೂರಾಗಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಇದೀಗ, ₹4.21 ಕೋಟಿ ವೆಚ್ಚದಲ್ಲಿ ಉತ್ತಮ ವಸತಿ ನಿಲಯ ನಿರ್ಮಿಸಲಾಗಿದೆ. ಒಟ್ಟು 32 ಕೊಠಡಿಗಳಿದ್ದು, 300ರಿಂದ 400 ವಿದ್ಯಾರ್ಥಿಗಳ ವಸತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ವಸತಿ ನಿಲಯದಲ್ಲಿ ಊಟದ ಜತೆ ವಿಶಾಲ ಕೋಣೆಗಳು, ಕಾಟ್‌, ಕಪಾಟ್‌, ಫ್ಯಾನ್, ಶೌಚಾಲಯ, ಬಿಸಿನೀರಿನ ವ್ಯವಸ್ಥೆ, ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಎಲ್ಲವೂ ಆನ್‌ಲೈನ್‌ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಗುಣಮಟ್ಟ ಶಿಕ್ಷಣ ಪಡೆಯುವ ಮೂಲಕ ಎಲ್ಲ ರಂಗದಲ್ಲೂ ಪ್ರತಿನಿಧಿಸುವ ಸ್ಪರ್ಧಾಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಹೆತ್ತವರು, ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತಂದಂತಾಗುತ್ತದೆ ಎಂದು ಕಿವಿಮಾತು ಹೇಳಿದರು.

ಈ ವೇಳೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಟಿ.ವಿ.ಮಂಟೂರ, ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಹಣಮಂತ ಭೋವಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಶಾಹಾಜದಬಿ ಹುಣಸಗಿ, ರಫಿಕ್‌ ದ್ರಾಕ್ಷೀ, ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಗೋಪಿ ಮಡಿವಾಳರ, ಸಂತೋಷ ನಾಯ್ಕೋಡಿ, ಹರೀಶ ಬೇವೂರ, ಅಶೋಕ ಪಾದಗಟ್ಟಿ ವಿವಿಧ ವಸತಿ ನಿಲಯದ ವಾರ್ಡನ್‌ಗಳು ಇತರರು ಇದ್ದರು.-------------

Share this article