ಶಿವಮೊಗ್ಗ: ನಗರವನ್ನು ಸುಂದರಗೊಳಿಸಲು ಹಾಗೂ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಸೂಡಾ ವತಿಯಿಂದ ಪಾರ್ಕ್‌ಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ, ಅಪಾರ್ಟ್ಮೆಂಟ್ ನಿರ್ಮಾಣ ಹೀಗೆ ಸುಮಾರು ₹500 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.ನಗರದ ಗೋಪಾಳಗೌಡ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಫ್ರೀಡಂ ಪಾರ್ಕಿನಲ್ಲಿ ಓಪನ್ ಜಿಮ್ ಅವಳವಡಿಕೆ ಕಾಮಗಾರಿಗಳಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚುವುದು ಪ್ರಾಧಿಕಾರದ ಉದ್ದೇಶವಾಗಿದೆ. ಆದರೆ ನಗರದಲ್ಲಿ ಇತ್ತೀಚೆಗೆ ಭೂಮಿ ಸಿಗುತ್ತಿಲ್ಲ. ದರ ಹೆಚ್ಚಿರುವ ಕಾರಣ ಪ್ರಾಧಿಕಾರದಿಂದ ನಗರದಲ್ಲಿ 1000 ಅಪಾರ್ಟ್ಮೆಂಟ್‌ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ನೀಡುವ ಯೋಜನೆ ಇದೆ ಎಂದು ವಿವರಿಸಿದರು.
ಊರುಗಡೂರಿನ 4 ಎಕರೆ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲು ಟೆಂಡರ್ ಕರೆಯಲು ಅನುಮೋದನೆಗೆ ಕಳುಹಿಸಲಾಗಿದೆ. ಹಾಗೂ ಜೆಎಚ್ ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆಯಿದ್ದು, ಖಾಸಗಿ ಅಪಾರ್ಟ್ಮೆಂಟ್‌ನಲ್ಲಿರುವಂತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್‌ಹೌಸ್, ಸಭಾಂಗಣ ಸೇರಿದಂತೆ ಇತರೆ ಎಲ್ಲ ಸೌಲಭ್ಯ ಹೊಂದಿರುವ ₹30 ರಿಂದ ₹40 ಲಕ್ಷ ಮೊತ್ತದಲ್ಲಿ 2 ಬಿಎಚ್‌ಕೆ ಮತ್ತು ₹50 ರಿಂದ ₹60 ಲಕ್ಷ ಮೊತ್ತದಲ್ಲಿ 3 ಬಿಎಚ್‌ಕೆ ಅಪಾರ್ಟ್ಮೆಂಟ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಒಂದೂಕಾಲು ಎಕರೆ ಜಾಗದಲ್ಲಿ 1 ಮಾಲ್ ಮತ್ತು ಸೋಮಿನಕೊಪ್ಪ 200 ರಸ್ತೆಯಲ್ಲಿ 1 ಒಟ್ಟು 2 ಮಾಲ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ವಾಜಪೇಯಿ ಲೇಔಟಿನಲ್ಲಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡುವ ಯೋಜನೆಯಿದೆ. ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿನಿತ್ಯ ಸಾವಿರಾರು ಜನರು ವಾಯುವಿಹಾರಕ್ಕೆ ಬರುವುದರಿಂದ ಇಲ್ಲಿ ಓಪನ್ ಜಿಮ್ ನಿರ್ಮಿಸಿದರೆ ಅವರಿಗೆಲ್ಲ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ₹25 ಲಕ್ಷ ವೆಚ್ಚದಲ್ಲಿ ಜಿಮ್‌ನ್ನು ಅಳವಡಿಸಲು ಗುದ್ದಲಿಪೂಜೆ ನೆರವೇರಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿವರಿಸಿದರು.ಗೋಪಾಳ 2ನೇ ಹಂತದಲ್ಲಿ ₹2.5 ಕೋಟಿ ಮೊತ್ತದಲ್ಲಿ ಒಳಚರಂಡಿ(ಯುಜಿಡಿ) ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಗೋಪಾಳದ ಕೆಎಚ್‌ಬಿ ಕಾಲೋನಿಯ ಕನಕ ಸರ್ಕಲ್ ಬಳಿ ₹5 ಲಕ್ಷ ಮೊತ್ತದ ಆಟೋ ಸ್ಟ್ಯಾಂಡ್, ವಿನೋಬನಗರದ ಶಿವಾಲಯ ಎದುರು ₹5 ಲಕ್ಷ ಮೊತ್ತದಲ್ಲಿ ಆಟೋ ಸ್ಟ್ಯಾಂಡ್ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಪಾಲಿಕೆ ಮಾಜಿ ಮೇಯರ್ ನಾಗರಾಜ್ ಕಂಕಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಪಾಲಿಕೆ ಮಾಜಿ ಉಪ ಮೇಯರ್ ಪಾಲಾಕ್ಷಿ, ಕೆ.ರಂಗನಾಥ್, ಫ್ರೀಡಂ ಪಾರ್ಕ್ ವಾಯುವಿಹಾರಿ ಮತ್ತು ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.