- ಶೃಂಗೇರಿ ಪಟ್ಟಣದಲ್ಲಿ ಹಲವೆಡೆ ರಸ್ತೆ ಮುಳುಗಡೆ, ತುಂಬಿ ಹರಿಯುತ್ತಿರುವ ನದಿಗಳು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿ ನಾಡಿನಲ್ಲಿ ಶನಿವಾರವೂ ಮಳೆ ಆರ್ಭಟ ಮುಂದುವರಿದು ಭಾರಿ ಗಾಳಿ ಮತ್ತು ಮಳೆಗೆ ಮಲೆನಾಡಿನ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಶೃಂಗೇರಿ ಪಟ್ಟಣದ ಹಲವು ರಸ್ತೆಗಳು ಜಲಾವೃತವಾಗಿವೆ. ಇಲ್ಲಿನ ಕಪ್ಪೆಶಂಕರ ದೇವಾಲಯ ಮುಳುಗಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಮಲೆನಾಡಿನ ಆರು ತಾಲೂಕುಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿ ಪಾತ್ರಗಳಲ್ಲಿರುವ ಅಡಕೆ, ತೆಂಗಿನ ತೋಟಗಳು, ಹೊಲಗದ್ದೆ ಗಳು ಜಲಪ್ರಳಯಕ್ಕೆ ತತ್ತರಿಸಿವೆ.ಕೆರೆಕಟ್ಟೆ, ನೆಮ್ಮಾರ್ ಸುತ್ತಮುತ್ತ ಮಳೆ ಬರುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯ ಶ್ರೀ ಶಾರದಾಂಬೆ ದೇವಾಲಯದ ಬಳಿ ಇರುವ ಕಪ್ಪೆ ಶಂಕರ ದೇವಾಲಯ ಹಾಗೂ ಶ್ರೀ ಮಠಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಇಲ್ಲಿನ ವಿದ್ಯಾರಣ್ಯಪುರ, ಭಾರತೀ ಬೀದಿ- ಕುರುಬಗೇರಿ ರಸ್ತೆಗಳಲ್ಲೂ ನೀರೇ ಆವರಿಸಿವೆ. ಗಾಂಧಿ ಮೈದಾನದ ಸಮೀಪಕ್ಕೆ ನೀರು ಬಂದಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಯಾತ್ರಿ ನಿವಾಸದ ಬಳಿ ನೀರು ಬರುವ ಸಾಧ್ಯತೆ ಇದೆ.
ಕೊಪ್ಪ ತಾಲೂಕಿನ ಜಯಪುರ, ಹರಿಹರಪುರದಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ.ಕುದುರೆಮುಖ, ಕಳಸ, ಮಾಗುಂಡಿ, ಬಾಳೆಹೊನ್ನೂರು ಸುತ್ತಮುತ್ತ ಬಿಡುವಿಲ್ಲದೆ ಮಳೆ ಬರುತ್ತಿದೆ. ಹೀಗಾಗಿ ಭದ್ರಾ ನದಿಯೂ ಕೂಡ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಭದ್ರ ನದಿಯ ಪಾತ್ರದಲ್ಲಿರುವ ಅಡಕೆ, ತೆಂಗಿನ ತೋಟಗಳು ಜಲಾವೃತವಾಗಿವೆ. ಎನ್.ಆರ್.ಪುರ ತಾಲೂಕಿನಲ್ಲೂ ಉತ್ತಮ ಮಳೆಯಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಬರುತ್ತಿರುವುದರಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಚಿಕ್ಕಮಗಳೂರು ತಾಲೂಕಿನ ಮಲೆನಾಡು ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.ಜಿಲ್ಲೆಯಲ್ಲಿ ಬಲವಾಗಿ ಗಾಳಿ ಬೀಸುತ್ತಿರುವುದರಿಂದ ಹಲವೆಡೆ ವಿದ್ಯುತ್ ಕಂಬಗಳು ಬಿದ್ದಿವೆ. ಶೃಂಗೇರಿ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲವಾಗಿದೆ. ಗ್ರಾಮೀಣ ಭಾಗದಲ್ಲಿ ಹಲವು ದಿನಗಳಿಂದ ವಿದ್ಯುತ್ ಇಲ್ಲ. ಮಲೆನಾಡಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಅಡಚಣೆಯಾಗಿದೆ.
26 ಕೆಸಿಕೆಎಂ 2ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶೃಂಗೇರಿಯ ಭಾರತೀ ಬೀದಿ - ಕುರುಬಗೇರಿ ರಸ್ತೆಯಲ್ಲಿ ನದಿಯ ನೀರು ನಿಂತಿರುವುದು.