ರೋಣ ತಾಲೂಕಿನಲ್ಲಿ ವರುಣನ ಆರ್ಭಟ

KannadaprabhaNewsNetwork |  
Published : May 25, 2026, 02:15 AM IST
​ಜಕ್ಕಲಿ ಅಗಸರ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು. | Kannada Prabha

ಸಾರಾಂಶ

ಧಾರಾಕಾರ ಮಳೆಗೆ ಜಕ್ಕಲಿ ಗ್ರಾಮದ ಅಗಸರ ಹಳ್ಳ ತುಂಬಿ ಹರಿಯುತ್ತಿದ್ದು, ರೋಣ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಗದಗ: ಜಿಲ್ಲೆಯ ರೋಣ ತಾಲೂಕಿನಾದ್ಯಂತ ಶನಿವಾರ ಮತ್ತು ಭಾನುವಾರ ಬೆಳಗಿನ ಜಾವ ಮಳೆ ಸುರಿದಿದೆ. ಒಂದೆಡೆ ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗೆ ಹೊಸ ಹುಮ್ಮಸ್ಸು ನೀಡಿದ್ದರೆ, ಮತ್ತೊಂದೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿದು ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರಭಸವಾಗಿ ಸುರಿದ ಮಳೆಯಿಂದಾಗಿ ರೈತರ ಜಮೀನುಗಳ ಬದುಗಳು ಒಡೆದು ಹೋಗಿದ್ದು, ಅಪಾರ ಪ್ರಮಾಣದ ಮಣ್ಣು ಕೊಚ್ಚಿ ಹೋಗಿ ಹಾನಿ ಸಂಭವಿಸಿದೆ.

​ರೋಹಿಣಿ ಮಳೆಗೆ ರೈತರ ಸಜ್ಜು: ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ವಾರದಿಂದ (ಮೇ 25ರಿಂದ) ರೋಹಿಣಿ ಮಳೆ ಪ್ರಾರಂಭವಾಗುತ್ತದೆ. ಈ ಮಳೆಯಲ್ಲಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುವುದಲ್ಲದೆ, ಮುಂದೆ ಬರುವ ಬೆಳೆಗಳಿಗೆ ರೋಗಬಾಧೆ ತಗುಲುವುದು ಕಡಿಮೆ ಎಂಬ ನಂಬಿಕೆ ರೈತರಲ್ಲಿದೆ. ಹೀಗಾಗಿ ಭಾನುವಾರ ಬೆಳಗಿನ ಜಾವ ಸುರಿದ ಮಳೆ ಬಿತ್ತನೆಗೆ ಭೂಮಿ ಹದಗೊಳಿಸಲು ರೈತರಿಗೆ ಹೊಸ ಆಶಾಕಿರಣ ಮೂಡಿಸಿದೆ.​ಜಕ್ಕಲಿ ಅಗಸರ ಹಳ್ಳ ತುಂಬಿ ರಸ್ತೆ ಸಂಪರ್ಕ ಕಡಿತ

ರಾತ್ರಿ ಸುರಿದ ಧಾರಾಕಾರ ಮಳೆಗೆ ಜಕ್ಕಲಿ ಗ್ರಾಮದ ಅಗಸರ ಹಳ್ಳ ತುಂಬಿ ಹರಿಯುತ್ತಿದ್ದು, ರೋಣ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇಲ್ಲಿನ ಕಿರು ಸೇತುವೆಯ ಪೈಪ್‌ಗಳು ಕಸಕಡ್ಡಿಯಿಂದಾಗಿ ಬಂದ್ ಆಗಿದ್ದರಿಂದ ನೀರು ಮುಂದೆ ಹೋಗಲಾರದೆ ರಸ್ತೆಯ ಮೇಲೆಲ್ಲ ಆವಾಂತರ ಸೃಷ್ಟಿಸಿದೆ. ಹಳ್ಳದ ನೀರಿನ ರಭಸಕ್ಕೆ ಅಪಾರ ಪ್ರಮಾಣದ ಮುಳ್ಳುಕಂಟಿಗಳು ರಸ್ತೆಯ ಮೇಲೆ ಬಂದು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ಕೊನೆಗೆ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ರಸ್ತೆಗಿಳಿದು ಮುಳ್ಳುಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

​ಸೇತುವೆ ಎತ್ತರ ಹೆಚ್ಚಿಸಲು ಆಗ್ರಹ: ಪ್ರತಿ ಬಾರಿ ಮಳೆ ಬಂದಾಗಲೂ ಈ ಕಿರು ಸೇತುವೆಯಿಂದಾಗಿ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತು ಈ ಸೇತುವೆಯ ಎತ್ತರವನ್ನು ಹೆಚ್ಚಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜಕ್ಕಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ: ಹೊಳೆಯಾದ ಹೆದ್ದಾರಿಗೆ ತೋಡಿದ ರಸ್ತೆ
29ರಿಂದ ಶಾಲಾರಂಭ, ಪುಸ್ತಕಗಳು ಸಿದ್ಧ