ಹಾವೇರಿ ಜಿಲ್ಲೆಯಲ್ಲಿ ಮುಂದುವರಿದ ಡೀಸೆಲ್‌ ಅಭಾವ

KannadaprabhaNewsNetwork |  
Published : May 25, 2026, 02:15 AM IST
ಹಾವೇರಿಯ ಪೆಟ್ರೋಲ್ ಬಂಕ್‌ವೊಂದರಲ್ಲಿ ಡೀಸೆಲ್‌ ತುಂಬಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತ ಜನರು ಹಾಗೂ ವಾಹನಗಳು. | Kannada Prabha

ಸಾರಾಂಶ

ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಅಣಿಯಾಗಿರುವ ಜಿಲ್ಲೆಯ ರೈತರ ಕೃಷಿ ಯಂತ್ರೋಪಕರಣಗಳಿಗೆ ಅಗತ್ಯವಿರುವ ಡೀಸೆಲ್‌ ಕೊರತೆ ಭಾನುವಾರವೂ ಮುಂದುವರಿದಿದೆ. ಜಿಲ್ಲಾ ಕೇಂದ್ರ ಹಾವೇರಿಯ ಕೆಲವು ಬಂಕ್‌ಗಳಲ್ಲಿ ಡೀಸೆಲ್‌ ಲಭ್ಯತೆ ಇಲ್ಲದ್ದರಿಂದ ಜನ ಪರದಾಡಿದ್ದು, ಲಭ್ಯವಿದ್ದ ಒಂದು ಬಂಕ್‌ನಲ್ಲಿ ಸರದಿ ಸಾಲಿನಲ್ಲಿ ವಾಹನಗಳು ನಿಂತಿರುವ ದೃಶ್ಯ ಕಂಡುಬಂದಿತು.

ಹಾವೇರಿ: ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಅಣಿಯಾಗಿರುವ ಜಿಲ್ಲೆಯ ರೈತರ ಕೃಷಿ ಯಂತ್ರೋಪಕರಣಗಳಿಗೆ ಅಗತ್ಯವಿರುವ ಡೀಸೆಲ್‌ ಕೊರತೆ ಭಾನುವಾರವೂ ಮುಂದುವರಿದಿದೆ. ಜಿಲ್ಲಾ ಕೇಂದ್ರ ಹಾವೇರಿಯ ಕೆಲವು ಬಂಕ್‌ಗಳಲ್ಲಿ ಡೀಸೆಲ್‌ ಲಭ್ಯತೆ ಇಲ್ಲದ್ದರಿಂದ ಜನ ಪರದಾಡಿದ್ದು, ಲಭ್ಯವಿದ್ದ ಒಂದು ಬಂಕ್‌ನಲ್ಲಿ ಸರದಿ ಸಾಲಿನಲ್ಲಿ ವಾಹನಗಳು ನಿಂತಿರುವ ದೃಶ್ಯ ಕಂಡುಬಂದಿತು.ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆ ಕೃಷಿ ಕಾರ್ಯಕ್ಕಾಗಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಅಗತ್ಯವಿದೆ. ಆದರೆ ಮಧ್ಯ ಪ್ರಾಚ್ಯ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟಿನಿಂದಾಗಿ ಸಮರ್ಪಕ ಇಂಧನ ಪೂರೈಕೆಯಾಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್‌ ಸಮಸ್ಯೆ ಉಲ್ಬಣಗೊಂಡಿದೆ. ಶನಿವಾರ ದಿನವಿಡಿ ಬಂಕ್‌ಗಳಲ್ಲಿ ಕ್ಯಾನ್ ಸಮೇತ ಸರದಿ ಸಾಲಿನಲ್ಲಿ ನಿಂತಿದ್ದ ಜನರು ಪಾಳಿ ಪ್ರಕಾರ ಡೀಸೆಲ್‌ ಪಡೆದುಕೊಂಡು ತೆರಳಿದರು. ಶನಿವಾರ ರಾತ್ರಿ ಕೆಲಹೊತ್ತು ಜೋರು ಮಳೆಯಾದ ಹಿನ್ನೆಲೆಯಲ್ಲಿ ಕೃಷಿ ಕಾರ್ಯಕ್ಕೆ ಮತ್ತಷ್ಟು ಅನುಕೂಲವಾಗಿದೆ. ಆದರೆ, ಭಾನುವಾರ ಬೆಳಗ್ಗೆ ಪಿ.ಬಿ. ರಸ್ತೆಯ ಒಂದು ಬಂಕ್‌ನಲ್ಲಿ ಮಾತ್ರ ಸಿಗುತ್ತಿದ್ದ ಡೀಸೆಲ್‌ ಪಡೆಯಲು ರೈತರು ಬೈಕ್‌, ಕಾರು, ಟ್ರ್ಯಾಕ್ಟರ್‌ಗಳಲ್ಲಿ ಕ್ಯಾನ್‌ ತಂದು ಸರದಿ ಸಾಲಿನಲ್ಲಿ ನಿಂತು ಡೀಸೆಲ್‌ ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಇನ್ನೂ ಕೆಲವು ಬಂಕ್‌ಗಳಲ್ಲಿ ಮಧ್ಯಾಹ್ನದ ತನಕ ಡೀಸೆಲ್‌ ಅಭಾವದ ಸಮಸ್ಯೆ ಮುಂದುವರಿದಿತ್ತು. ಮಧ್ಯಾಹ್ನದ ಆನಂತರ ಟ್ಯಾಂಕರ್ ಬಂದಿದ್ದರಿಂದ ಸ್ವಲ್ಪ ನಿರಾಳರಾದರು.ಜಿಲ್ಲೆಯ ಸವಣೂರು, ಹಾವೇರಿ, ಹಾನಗಲ್ಲ, ಶಿಗ್ಗಾಂವಿ, ರಾಣಿಬೆನ್ನೂರು ಸೇರಿದಂತೆ ಹಲವು ಭಾಗಗಳಲ್ಲಿ ಡೀಸೆಲ್ ಸಿಗದೇ ರೈತರು ಪರದಾಡುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದ ಹೊಸರಿತ್ತಿ, ಗುತ್ತಲ ಭಾಗದ ಕೆಲವೆಡೆ ಬೈಕ್, ಕಾರುಗಳಲ್ಲಿ ಬಂದು ಪೆಟ್ರೋಲ್ ಬಂಕ್‌ಗಳ ಎದುರು ಜನರು ಕ್ಯಾನ್ ಹಿಡಿದು ಸರದಿ ಸಾಲಿನಲ್ಲಿ ನಿಂತ ದೃಶ್ಯಗಳು, ವಾಹನಗಳ ಉದ್ದನೆಯ ಸಾಲುಗಳು ಕಂಡುಬರುತ್ತಿವೆ. ಇಂಧನ ಪೂರೈಕೆಗೆ ಒತ್ತಾಯ: ಇಂಧನ ಅಭಾವದಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ತೈಲ ಕಂಪನಿಗಳು ತಕ್ಷಣ ಕ್ರಮ ಕೈಗೊಂಡು ಸಮರ್ಪಕವಾಗಿ ಡೀಸೆಲ್ ಹಾಗೂ ಪೆಟ್ರೋಲ್ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ: ಹೊಳೆಯಾದ ಹೆದ್ದಾರಿಗೆ ತೋಡಿದ ರಸ್ತೆ
29ರಿಂದ ಶಾಲಾರಂಭ, ಪುಸ್ತಕಗಳು ಸಿದ್ಧ