ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವಾಸವಿ ಕ್ಲಬ್‌ನ ಹಿಂದಿನ ಹಾಗೂ ಇಂದಿನ ಅಧ್ಯಕ್ಷರು ಹಾಗೂ ಸದಸ್ಯರು ಸಮಾಜ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆ ಪಡೆಯುವ ಜತೆಗೆ ವಾಸವಿ ಕ್ಲಬ್‌ನ ಘನತೆ ಹಾಗೂ ಹಿರಿಮೆಯನ್ನು ವಿಶ್ವವ್ಯಾಪ್ತಿಗೊಳಿಸುವಲ್ಲಿ ಉತ್ಸಾಹದಿಂದ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹಿರಿಯೂರು ಆರ್‍ಯವೈಶ್ಯ ಮಂಡಳಿ ಅಧ್ಯಕ್ಷ ಎಚ್.ಎಸ್.ನಾಗರಾಜಗುಪ್ತ ನುಡಿದರು.ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ವಾಸವಿ ಕ್ಲಬ್ ಮತ್ತು ಬೆಂಗಳೂರಿನ ಓಮೆಗಾ ರೀಹ್ಯಾಬ್ ಫೆಡರೇಷನ್ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ, ವ್ಹೀಲ್ ಚೇರ್, ಶ್ರವಣ ಸಾಧನೆಗಳು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ವಿಕಲ ಚೇತನರ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಅವರಿಗೆ ಅಗತ್ಯ ಕೃತಕ ಸಾಧನಗಳನ್ನು ನೀಡಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಬಹುಮುಖ್ಯವಾಗಿದೆ. ಆತ್ಮವಿಶ್ವಾಸದಿಂದ ಕೂಡಿದ ಸುಂದರ ಬದುಕು ರೂಪಿಸಿಕೊಳ್ಳಲು ವಾಸವಿ ಕ್ಲಬ್ ಇಂದು ಕೈಗೊಂಡಿರುವ ಸಮಾಜ ಸೇವಾ ಕಾರ್ಯ ಹಾಗೂ ಓಮೆಗಾ ರೀಹ್ಯಾಬ್ ಫೆಡರೇಷನ್‌ನವರ ಸಹಕಾರ ಹಾಗೂ ನಿಸ್ವಾರ್ಥ ಸೇವೆ ಅನನ್ಯವಾಗಿದೆ ಎಂದು ಪ್ರಶಂಶಿಸಿದರು.ಸಮಾಜಸೇವೆ ಮಾಡುತ್ತಾ ಕೊಡುಗೈ ದಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್‍ಯವೈಶ್ಯ ಸಮಾಜದ ವಾಸವಿ ಕ್ಲಬ್ ನಮ್ಮ ಹಿಂದು ಧರ್ಮ ಹಾಗೂ ಸಮಾಜವನ್ನು ಬೆಳೆಸಲು ಮತ್ತು ಪೋಷಿಸುವ ಕೆಲಸದಲ್ಲಿ ನಾವುಗಳೆಲ್ಲರು ಕೈಗೂಡಿಸಬೇಕಿದೆ ಎಂದು ಸಲಹೆ ನೀಡಿದರು.ಹಿರಿಯೂರು ಪಟ್ಟಣದ ರೋಟರಿ ಮತ್ತು ರೆಡ್ ಕ್ರಾಸ್ ಸಂಸ್ಥೆ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿದೆ. ಆದ್ದರಿಂದಲೇ ರೋಟರಿ ಸಂಸ್ಥೆ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಛೇರ್‍ಮನ್ ಸುಂದರರಾಜಶೆಟ್ಟಿ ಅವರು ಕಳೆದ ಹತ್ತು ವರ್ಷಕ್ಕೂ ಹೆಚ್ಚು ಸೇವೆ ಮಾಡಿರುವುದರಿಂದ ಸಂಸ್ಥೆಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲಾಗಿದೆ ಎಂದು ಪ್ರಶಂಶಿಸಿದರು.ಹಿರಿಯೂರು ರೆಡ್ ಕ್ರಾಸ್ ಸಂಸ್ಥೆಯ ಛೇರ್‍ಮನ್ ಸುಂದರರಾಜಶೆಟ್ಟಿ ಮಾತನಾಡಿ, ನಿಮ್ಮೂರಿನಲ್ಲಿ ಆಯೋಜಿಸಿರುವ ಉಚಿತ ಕೃತಕ, ಕೈಕಾಲು ಜೋಡಣಾ ಶಿಬಿರ ಕಳೆದ ವರ್ಷವೇ ಆಯೋಜನೆ ಮಾಡಲು ಯೋಜನೆ ಸಿದ್ಧವಾಗಿತ್ತು, ಆದರೆ ಬೆಂಗಳೂರಿನ ಓಮೆಗಾ ರೀಹ್ಯಾಬ್ ಫೆಡರೇಷನ್‌ಗೆ ದೊರಕಬೇಕಾದ ೮೦ಜಿ ಮಾನ್ಯತಾ ಪತ್ರ ದೊರೆಯುವಲ್ಲಿ ತಡವಾಗಿದ್ದರಿಂದ ಈ ಶಿಬಿರ ಒಂದು ವರ್ಷ ಮುಂದಕ್ಕೆ ಹೋಯಿತೆಂದು ಮಾಹಿತಿ ನೀಡಿದರು.ವಾಸವಿಕ್ಲಬ್ ಅಧ್ಯಕ್ಷೆ ಹೇಮಾ ನಾಗೇಂದ್ರ, ವಾಸವಿ ಕ್ಲಬ್‌ನ ರಾಜಶೇಖರಶೆಟ್ಟಿ ಹಾಗೂ ಓಮೆಗಾ ರೀಹ್ಯಾಬ್ ಫೆಡರೇಷನ್‌ನ ದಿನೇಶ್ ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ೨೦ ಜನರಿಗೆ ಕೈ ಹಾಗೂ ಕಾಲು ಜೋಡಣೆ, ೬ ಜನರಿಗೆ ಶ್ರವಣ ಸಾಧನ ಹಾಗೂ ೪ ಜನರಿಗೆ ವ್ಹೀಲ್ ಚೇರ್ ವಿತರಿಸಲಾಯಿತು. ವಾಸವಿಕ್ಲಬ್‌ನ ನಿರ್ದೇಶಕರಾದ ವೈಶಾಲಿ ಪ್ರಾರ್ಥಿಸಿದರು, ಅಮೂಲ್ಯ ಕಾರ್ತಿಕ್ ಸ್ವಾಗರಿಸಿದರು ಹಾಗೂ ಅನುಪಮ ನಿರೂಪಿಸಿದರು. ವೇದಿಕೆಯಲ್ಲಿ ವಾಸವಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ರೋಹಿತ್ ಶ್ರೀಧರ್, ಕಾರ್ಯದರ್ಶಿ ದೀಪಾ ಬಾಲಾಜಿ, ಖಜಾಂಚಿ ಲಕ್ಷ್ಮೀಗುಪ್ತ ಉಪಸ್ಥಿತರಿದ್ದರು.