ರಾಮನಗರ: ಹನೂರಿನಲ್ಲಿ ಮೂವರು ಬೇಟೆಗಾರರ ಶೂಟೌಟ್ ಪ್ರಕರಣ ವಿರೋಧಿಸಿ ಹಾಗೂ ಮೃತರ ಕುಟುಂಬಗಳಿಗೆ 1 ಕೋಟಿ ಪರಿಹಾರ ವಿತರಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ವಾಟಾಳ್ ನಾಗರಾಜ್ ಮಾತನಾಡಿ, ಇದು ಪ್ರಜಾಪ್ರಭುತ್ವವೋ ಇಲ್ಲ ಸರ್ವಾಧಿಕಾರಿ ಧೋರಣೆಯೋ ಎಂಬ ಪ್ರಶ್ನೆ ಎದುರಾಗಿದೆ. ಈ ಸರ್ಕಾರಕ್ಕೆ ಶಕ್ತಿಯಿಲ್ಲ, ಶಾಸನಸಭೆ ಸಹ ವ್ಯರ್ಥ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಶೂಟೌಟ್ ನಲ್ಲಿ ಮೂವರು ಅಮಾಯಕರು ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರ ಕಾಟಾಚಾರಕ್ಕೆ 15 ಲಕ್ಷ ಪರಿಹಾರ ಕೊಡುತ್ತದೆ. ಈ ಬಗ್ಗೆ ಯಾವೊಬ್ಬ ಕವಿಗಳು, ಬರಹಗಾರರು, ಸಾಹಿತಿಗಳು ಧ್ವನಿ ಎತ್ತಿಲ್ಲ. ಅಧಿವೇಶನದಲ್ಲಿಯೂ ಸೂಕ್ತವಾಗಿ ಚರ್ಚೆ ಆಗುತ್ತಿಲ್ಲ. ಎಲ್ಲಾ ಶಾಸಕರು ದನ ಮೇಯಿಸಲು ಹೋಗಬೇಕು ಎಂದು ಕಿಡಿಕಾರಿದರು.ಅರಣ್ಯದೊಳಗೆ ಅನಧಿಕೃತವಾಗಿ ಹೋಗಿದ್ದರೆ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು. ಅದನ್ನು ಬಿಟ್ಟು ಕೊಲೆ ಮಾಡಲು ಇವರಿಗೆ ಅನುಮತಿ ಕೊಟ್ಟಿದ್ದು ಯಾರು. ಸರ್ಕಾರ ಈ ಪ್ರಕರಣವನ್ನು ಸಮರ್ಥನೆ ಮಾಡುತ್ತಿರುವುದು ಏಕೆ. ಇಂತಹ ಮಾನಗೆಟ್ಟ ಕೆಲಸ ಯಾರು ಮಾಡಬಾರದು. ಈ ಬಗ್ಗೆ ಮುಂದಿನ ಶನಿವಾರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
17ಕೆಆರ್ ಎಂಎನ್ 5.ಜೆಪಿಜಿ