ಸಾಲದ ಹೊರೆ ಹೆಚ್ಚಿಸಿ, ಕರಾವಳಿ ಕಡೆಗಣಿಸಿದ ಬಜೆಟ್: ಕಾಮತ್‌

KannadaprabhaNewsNetwork |  
Published : Mar 08, 2026, 02:45 AM IST
ವೇದವ್ಯಾಸ ಕಾಮತ್‌ | Kannada Prabha

ಸಾರಾಂಶ

ಮಂಗಳೂರು: ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಕರಾವಳಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ಮಂಗಳೂರು: ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಕರಾವಳಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು 4.48 ಲಕ್ಷ ಕೋಟಿ ರು. ದೊಡ್ಡ ಗಾತ್ರದ ಬಜೆಟ್ ಎಂದು ಕಾಂಗ್ರೆಸಿಗರು ಬಿಂಬಿಸುತ್ತಿದ್ದಾರೆ. ಆದರೆ ಪ್ರಸಕ್ತ ಬಜೆಟ್‌ನಲ್ಲಿ 97,449 ಕೋಟಿ ರು. ವಿತ್ತೀಯ ಕೊರತೆ ಮತ್ತು 29,957 ಕೋಟಿ ರು. ರಾಜಸ್ವ ಸಂಗ್ರಹ ಕೊರತೆ ತೋರಿಸಲಾಗಿದೆ. ಸಂಪದ್ಭರಿತವಾಗಿದ್ದ ನಾಡಿಗೆ ಒಟ್ಟು ಸಾಲದ ಹೊರೆಯನ್ನು 8.24 ಲಕ್ಷ ಕೋಟಿ ರು.ಗೆ ಏರಿಸಿದ್ದೇ ಸಿದ್ದರಾಮಯ್ಯ ಅವರ ಸಾಧನೆ ಎಂದರು.

ಕಳೆದ 70 ವರ್ಷಗಳಲ್ಲಿ ಎಲ್ಲ ಮುಖ್ಯಮಂತ್ರಿಗಳು ಮಾಡಿದ ಸಾಲ 2.25 ಲಕ್ಷ ಕೋಟಿ ರು. ಆದರೆ, ಸಿದ್ದರಾಮಯ್ಯ ಅವರು ತಮ್ಮ ಒಟ್ಟಾರೆ 7 ವರ್ಷದ ಸಿಎಂ ಅವಧಿಯಲ್ಲಿ ಸುಮಾರು 6 ಲಕ್ಷ ಕೋಟಿ ರು. ಸಾಲದ ಹೊರೆಯನ್ನು ರಾಜ್ಯದ ಜನರ ಮೇಲೆ ಹಾಕಿದ್ದಾರೆ ಎಂದರು.

ಅಧಿಕಾರಕ್ಕೆ ಬರುವ ಮೊದಲು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕರಾವಳಿಗೆ ಪ್ರತ್ಯೇಕ ಬಜೆಟ್ ಕೊಡುತ್ತೇವೆ, ಕರಾವಳಿ ಅಭಿವೃದ್ಧಿಗೆ 2500 ಕೋಟಿ ರು. ಮೀಸಲಿಡುತ್ತೇವೆ, ಪ್ರತಿ ಮೀನುಗಾರರಿಗೆ 10 ಲಕ್ಷ ರು. ವಿಮಾ ಯೋಜನೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಕರಾವಳಿಗೆ ಪ್ರತ್ಯೇಕ ಬಜೆಟ್ ಬಿಡಿ, ಹೇಳಿಕೊಳ್ಳುವಂಥ ಒಂದು ಯೋಜನೆಯನ್ನೂ ಘೋಷಣೆ ಮಾಡಿಲ್ಲ. ಅಲ್ಲದೆ, ಕರಾವಳಿಯ ಅಭಿವೃದ್ಧಿಗೆ ದಶ ಸಂಕಲ್ಪ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಅದರ ಒಂದು ಅಂಶವೂ ಇಲ್ಲ ಎಂದು ಕಾಮತ್‌ ಟೀಕಿಸಿದರು.

2023ರ ಕಾಂಗ್ರೆಸ್ ಸಮಾವೇಶದಲ್ಲಿ, ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ್ಸ್ ಅಭಿವೃದ್ಧಿ ನಿಗಮಕ್ಕೆ ವರ್ಷಕ್ಕೆ 250 ಕೋಟಿ ರು.ಗಳಂತೆ 5 ವರ್ಷಗಳಲ್ಲಿ 1,250 ಕೋಟಿ ರು. ಅನುದಾನ ನೀಡುವುದಾಗಿ ವಾಗ್ದಾನ ನೀಡಲಾಗಿತ್ತು. ಆದರೆ ಈ ವರ್ಷದ ಬಜೆಟ್‌ನಲ್ಲಿ ಒಂದು ರು. ಅನುದಾನ ಮೀಸಲಿಟ್ಟಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಓಲೈಕೆ ಮಾತ್ರ ಕಣ್ಣಿಗೆ ಕಾಣುವಂತಿದೆ. ಕರಾವಳಿಯನ್ನು ಕೇವಲ ತೆರಿಗೆ ವಸೂಲಿ ಕೇಂದ್ರವಾಗಿ ಮಾತ್ರ ನೋಡಿ, ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸುತ್ತಿರುವುದು ಖಂಡನೀಯ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈಕ್‌ಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಸಂಚಾರ: ಪ್ರಕರಣ ದಾಖಲು
ಆದಿವಾಸಿಗಳ ಬೇಡಿಕೆ ಆಲಿಸಿದ ಜಿಲ್ಲಾಧಿಕಾರಿ