ಕನ್ನಡಪ್ರಭ ವಾರ್ತೆ ಅಕ್ಕಿಆಲೂರು
ಪಟ್ಟಣದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವೀರಭದ್ರ ದೇವರ ಮಹಾರಥೋತ್ಸವ ಭಕ್ತರ ಹರ್ಷೋದ್ಘಾರದ ನಡುವೆ ಭಾನುವಾರ ಅದ್ಧೂರಿಯಾಗಿ ನೆರವೇರಿತು.ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ರಥಬೀದಿ ಸಂಪೂರ್ಣವಾಗಿ ಹೂವು, ತಳೀರು-ತೋರಣ, ರಂಗೋಲಿ, ಬಂಟಿಂಗ್ಸ್‌ಗಳಿಂದ ಅಲಂಕೃತಗೊಂಡಿತ್ತು. ಸಂಜೆ ಆರಂಭವಾದ ಮಹಾರಥೋತ್ಸವಕ್ಕೆ ವಿರಕ್ತಮಠದ ಶಿವಬಸವ ಶ್ರೀಗಳು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಾಳೂರಿನ ಕುಮಾರ ಶ್ರೀಗಳು, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಶ್ರೀಗಳು, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು.
ಗಂಗಾರತಿ ಮಾದರಿಯಲ್ಲಿ ರಥಾರತಿ:ಅಕ್ಕಿಆಲೂರು ಉತ್ಸವ-೨೦೨೪ ಪ್ರಯುಕ್ತ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವವನ್ನು ಗಂಗಾರತಿ ಮಾದರಿಯಲ್ಲಿ ವಿಶೇಷವಾಗಿ ೩ ಬಗೆಯ ಆರತಿ ಬೆಳಗುವ ಮೂಲಕ ಆಚರಿಸಲಾಯಿತು. ಈ ನಾಡಿನಲ್ಲಿಯೇ ಇಂತಹ ಮೊದಲ ಪ್ರಯತ್ನಕ್ಕೆ ಅಕ್ಕಿಆಲೂರಿನ ಜನತೆ ಸಾಕ್ಷಿಯಾಯಿತು. ವೇ. ಶಾಂತಯ್ಯ ಶಾಸ್ತ್ರೀಗಳ ನೇತೃತ್ವ ವೈದ್ಧಿಕ ತಂಡದವರು ಮಣ್ಣಿನ ಹಣತೆ, ತಾಮ್ರದ ಹಣತೆ, ಪಂಚಲೋಹದ ಹಣತೆ ಹೀಗೆ ವಿವಿಧ ಬಗೆಯ ಆರತಿಗಳನ್ನು ಮಹಾರಥೋತ್ಸವಕ್ಕೆ ಬೆಳಗುವ ಮೂಲಕ ಅಕ್ಕಿಆಲೂರಿನ ಸುಖ ಸಮೃದ್ಧಿಗಾಗಿ ಸಂಕಲ್ಪಿಸಿದರು. ಕಾಶಿ, ಹೃಷಿಕೇಷ, ಹರಿದ್ವಾರಗಳಲ್ಲಿ ಗಂಗಾರತಿಯನ್ನು ಕಣ್ತುಂಬಿಕೊಳ್ಳಲು ಕಾಯುವ ಜನತೆಗೆ ಅಕ್ಕಿಆಲೂರ ಉತ್ಸವ ಉತ್ತಮ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು.
ನಂತರ ಪೇಟೆ ಓಣಿಯ ಮೂಲಕ ಭವ್ಯ ರಥಬೀದಿಯುದ್ಧಕ್ಕೂ ಸಂಚರಿಸಿದ ಮಹಾರಥೋತ್ಸವ ನೆರೆದ ನೂರಾರು ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥಬೀದಿಯಲ್ಲಿ ಮಕ್ಕಳು, ಮಹಿಳೆಯರು ಬಿಡಿಸಿದ ಬೃಹತ್ ರಂಗೋಲಿ ಗಮನ ಸೆಳೆದವು. ರಥದ ಕಳಸಕ್ಕೆ ಬಾಳೆಹಣ್ಣು ಮತ್ತು ಕಾರೀಕವನ್ನು ಎಸೆಯುವ ಮೂಲಕ ಭಕ್ತರು ಭಕ್ತಿಭಾವ ಮೆರೆದರೇ, ನೂತನವಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ ನವವಿವಾಹಿತರು ಕಳಸ ವೀಕ್ಷಣೆ ಮಾಡುವ ಮೂಲಕ ಧನ್ಯತೆ ಮೆರೆದರು. ಪ್ರತಿ ಮನೆಗಳ ಮುಂದೆ ಕಟ್ಟಲಾದ ಕೇಸರಿ ಧ್ವಜಗಳು, ಹಚ್ಚಿಡಲಾದ ಹಣತೆಗಳು ಹಿಂದೂ ಸಂಪ್ರದಾಯದ ಪುರಾತನ ಆಚರಣೆಯನ್ನು ನೆನಪಿಸುವಂತಿದ್ದವು. ರಥದ ಬೀದಿಯ ಮೂಲಕ ಸಾಗಿ ಬಂದ ರಥೋತ್ಸವ ಕೆಳಗಿನ ಓಣಿ ತಲುಪಿ ಪುನಃ ವೀರಭದ್ರ ದೇವರ ದೇವಸ್ಥಾನದೆದುರು ಸಂಪನ್ನಗೊಂಡಿತು.