ಗದಗ: 101 ಗುಡಿ, ಬಾವಿಗಳ ಐತಿಹ್ಯ ಹೊಂದಿರುವ ಉತ್ಖನನ ಮೂಲಕ ರಾಜ್ಯದ ಗಮನ ಸೆಳೆದಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಕೋಟೆ ವೀರಭದ್ರೇಶ್ವರ ರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು.
ರಥೋತ್ಸವದಲ್ಲಿ ಕೋಟೆ ವೀರಭದ್ರೇಶ್ವರ ಯುವಕ ಮಂಡಳದ ನಂದಿಕೋಲು ಸಮ್ಮಾಳ ಮೇಳದ ಕುಣಿತ ಗಮನ ಸೆಳೆಯಿತು. ಭಕ್ತರು ರಥಕ್ಕೆ ಉತ್ತತ್ತಿ ಎಸೆದು ಭಕ್ತಿಯನ್ನು ಸಮರ್ಪಿಸಿದರು. ಹರ ಹರ ಮಹಾದೇವ, ಕೋಟೆ ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಘೋಷಣೆಗಳನ್ನು ಹಾಕಿದರು.
ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರದವರೆಗೂ ಸಾಗಿದ ತೇರು ಸಾಂಪ್ರದಾಯಿಕವಾಗಿ ಹತ್ತಿರದ ಹನುಮನ ಬಾವಿಗೆ ತೆರಳಿದ ಪಾಲಕಿಗೆ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಇದಕ್ಕೂ ಪೂರ್ವ ಬೆಳಗ್ಗೆ ವಿವಿಧ ಹೂವುಗಳ ಅಲಂಕಾರದಿಂದ ಸಿಂಗರಿಸಿರುವ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ನೈವೇಧ್ಯವನ್ನು ತಲುಪಿಸಿ ತಮ್ಮ ಸಂಕಲ್ಪವನ್ನು ಅರ್ಪಿಸಿದರು.ಇಂದು ತೋಂಟದಾರ್ಯ ಮಠದ ಜಾತ್ರಾ ಪ್ರಾರಂಭೋತ್ಸವಗದಗ: ನಗರದ ಇತಿಹಾಸ ಪ್ರಸಿದ್ಧ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಪ್ರಾರಂಭೋತ್ಸವ ಕಾರ್ಯಕ್ರಮ ಏ. 1ರಂದು ಬುಧವಾರ ಸಂಜೆ 6.30ಕ್ಕೆ ನಗರದ ಶ್ರೀಮಠದಲ್ಲಿ ಜರುಗಲಿದೆ.ಕಾರ್ಯಕ್ರಮವನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸುವರು. ಸಾನ್ನಿಧ್ಯವನ್ನು ಶಿವಮೊಗ್ಗ ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ವಹಿಸುವರು. ಸಾನ್ನಿಧ್ಯವನ್ನು ಹಾವೇರಿಯ ಸದಾಶಿವ ಸ್ವಾಮಿಗಳು, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು, ಆಡಿ- ಹಂದಿಗುಂದದ ಶಿವಾನಂದ ಸ್ವಾಮಿಗಳು, ಶಿರೋಳ- ಭೈರನಟ್ಟಿಯ ಶಾಂತಲಿಂಗ ಸ್ವಾಮಿಗಳು, ರುದ್ನೂರಿನ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು, ಸಿರಸಂಗಿಯ ಬಸವಮಹಾಂತ ಸ್ವಾಮಿಗಳು ವಹಿಸುವರು.ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಹಣತೆ ಹಚ್ಚಿದವರು, ತಾರಕ ಗುರೂಪದೇಶ ಗ್ರಂಥಗಳು ಲೋಕಾರ್ಪಣೆಗೊಳಿಸಲಾಗುವುದು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಗ್ರಂಥ ಬಿಡುಗಡೆ ನೆರವೇರಿಸುವರು. ಧಾರವಾಡದ ಆಕಾಶವಾಣಿ ಕಲಾವಿದರಾದ ಸ್ಥಾಯಿ ನಾಕೋಡ ಹಾಗೂ ಬಾಲಚಂದ್ರ ನಾಕೋಡ ಅವರಿಂದ ವಚನ ಸಂಗೀತ ಜರುಗುವುದು ಎಂದು ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.