ಧಾರವಾಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಪ್ರಾಚೀನ ವಿಗ್ರಹವೊಂದು ಪತ್ತೆಯಾಗಿದ್ದು, ಅದು ಶ್ರೀರಾಮನ ವಿಗ್ರಹ ಎಂದು ನಂಬಲಾಗಿತ್ತು. ಆದರೆ, ಅದು ಶ್ರೀರಾಮ-ಲಕ್ಷ್ಮಣರ ಶಿಲ್ಪವಲ್ಲ, ವೀರ ಮಹಾಸತಿ ಕಲ್ಲು ಎಂದು ಕರ್ನಾಟಕ ವಿವಿ ಪುರಾತತ್ವದ ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್.ಎಂ. ಷಡಕ್ಷರಯ್ಯ ಹೇಳಿದ್ದಾರೆ.
ಹೊಟ್ಟೆಯ ಮೇಲೆ ಅಡ್ಡವಾಗಿ ಬಾಣ ಕಟ್ಟಿದ್ದಾರೆ. ಕಾಲುಗಳಲ್ಲಿ ಕಡಗಗಳನ್ನು ಹಾಕಿಕೊಂಡಿದ್ದಾರೆ. ತಲೆಗೂದಲನ್ನು ಮೇಲೆ ಸುತ್ತಿ ತುರುಬು ಕಟ್ಟಿದ್ದಾರೆ. ಮೀಸೆ, ದುಂಡು ಕಣ್ಣು, ಹುಬ್ಬು, ಉದ್ದನೆಯ ಮೂಗು ಎದ್ದುಕಾಣುವಂತೆ ತೋರಿಸಲಾಗಿದೆ. ಇವರೀರ್ವರೂ ಯೋಧರೆಂದು ಸುಲಭವಾಗಿ ಗುರುತಿಸಬಹುದು. ಇವರು ಯುದ್ಧದಲ್ಲಿ ವೀರಮರಣ ಹೊಂದಿರುವ ಕುರುಹು ಎಂದು ವಿಶ್ಲೇಷಿಸಬಹುದಾಗಿದೆ.
ಈ ಇಬ್ಬರೂ ಯೋಧರು ಯುದ್ಧಭೂಮಿಯಲ್ಲಿ ವೀರಮರಣವನ್ನಪ್ಪಿದಾಗ ಅವರ ಧರ್ಮಪತ್ನಿಯರು ಚಿತೆಗೆ ಹಾರಿ ತಮ್ಮ ಪತಿಯೊಂದಿಗೆ ಸಹಗಮನ ಮಾಡುತ್ತಿದ್ದರು. ಈ ಯೋಧರ ಇಬ್ಬರೂ ಪತ್ನಿಯರಲ್ಲಿ ಶಿಲ್ಪದ ಬಲಭಾಗದಲ್ಲಿ ನಿಂತವಳ ವೇಷದಲ್ಲಿ ಲಂಗ ಧರಿಸಿದ್ದು, ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದ್ದಾಳೆ. ವಸ್ತ್ರಾಭರಣ ಧಾರಿಯಾಗಿರುವ ಇವಳು ತನ್ನ ಕೇಶಗಳನ್ನು ವಿಶೇಷವಾಗಿ ಮೇಲೆ ಸುತ್ತಿ ತುರುಬು ಕಟ್ಟಿದ್ದಾಳೆ. ಎಡಗಡೆ ನಿಂತವಳು ಬಲಗೈ ಮೇಲಕ್ಕೆ ಎತ್ತಿದ್ದು ಕೈಯಲ್ಲಿ ಕಮಲದ ಮೊಗ್ಗನ್ನು ಹಿಡಿದಂತಿದೆ. ತನ್ನ ಪಾದದ ವರೆಗೆ ಉಡಿಗೆ ಉಟ್ಟುಕೊಂಡಿದ್ದು, ಸಾಮಾನ್ಯ ರೀತಿಯ ಕೇಶಗಳಿವೆ.ಮೇಲಿನ ಮೂರನೇ ಫಲಕದಲ್ಲಿ ಎಡಕ್ಕೆ ಕುಳಿತ ನಂದಿ ಇರುವುದರಿಂದ ಅದು ಶಿವನ ಸಾನ್ನಿಧ್ಯ. ವೀರ ಮರಣವನ್ನಪ್ಪಿದ ಯೋಧನು ಮತ್ತು ಚಿತೆಗೆ ಹಾರಿ ಸಹಗಮನ ಮಾಡಿ ಮಡಿದ ತನ್ನ ಪತ್ನಿ ಇಬ್ಬರೂ ಶಿವಸಾಯುಜ್ಯ ಪದವಿ ಪಡೆದು ಕೈಮುಗಿದು ಕುಳಿತಿರುವರು. ದೇಹಾಂಗ, ವಸ್ತ್ರ ಮತ್ತು ಆಭರಣಗಳ ಲಕ್ಷಣಗಳಿಂದ ಈ ಶಿಲ್ಪದ ಕಾಲಮಾನವು ಸುಮಾರು ಕ್ರಿ ಶ. 14 ರಿಂದ 15ನೇ ಶತಮಾನ ಇರಬಹುದೆಂದು ತರ್ಕಿಸಲಾಗಿದೆ ಎಂದು ಷಡಕ್ಷರಯ್ಯ ಮಾಹಿತಿ ನೀಡಿದ್ದಾರೆ.