ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ । ರೇಣುಕಾಚಾರ್ಯ ಜಯಂತಿ ಮಹೋತ್ಸವ
ಆದಿ ರೇಣುಕಾಚಾರ್ಯ ಜಯಂತಿ ಮಹೋತ್ಸವ ಯುಗ ಯುಗಗಳಿಂದ ಆಚರಣೆ ಮಾಡುತ್ತ ಬರುವ ಮೂಲಕ ವೀರಶೈವ ಪರಂಪರೆಯಾಗಿ ಪರಿವರ್ತನೆಗೊಂಡಿದೆ ಎಂದು ಬೀರೂರು ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕಡೂರು ತಾಪಂ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಪಂಚತತ್ವಗಳ ಅಧಿಪತಿಯಾಗಿ ಪಂಚಾಚಾರ್ಯರಾಗಿ ಸರ್ವ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ ಧರ್ಮೋಪದೇಶವನ್ನು ನೀಡುತ್ತಾ ಬಂದಿದ್ದಾರೆ. 12 ನೇ ಶತಮಾನದಿಂದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಯುಗ ಯುಗಗಳಿಂದಲೂ ರೇಣುಕಾಚಾರ್ಯರು ಇದ್ದರು, ಮುಂದೆಯೂ ಇರುತ್ತಾರೆ ಎಂದರು.
ತಾಲೂಕು ವೀರಶೈವ ಮಹಾ ಸಭಾದ ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಪ್ರಪಂಚಕ್ಕೆ ಸಾರಿದವರು ಪಂಚಾಚಾರ್ಯರು. ಇಂತಹ ಜಯಂತಿ ಮಹೋತ್ಸವಗಳು ಈಗೀನ ಪೀಳಿಗೆಗೆ ಪ್ರಸ್ತುತವಾಗಿದ್ದು ಕಳೆದ 3 ವರ್ಷಗಳಿಂದ ಆಚರಣೆ ಮಾಡುತ್ತ ಬರುತಿದ್ದೇವೆ ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರೇಣುಕಾಚಾರ್ಯರು ಲೋಕ ಕಲ್ಯಾಣಕ್ಕಾಗಿ ಧರ್ಮಪಾಲನೆ ಮಾಡುತ್ತಾ ನಮ್ಮ ಜಿಲ್ಲೆಯಲ್ಲಿ ನೆಲೆ ನಿಂತಿರುವುದು ಹೆಮ್ಮೆಯ ಸಂಗತಿ. ಸಮಾಜಗಳಿಗೆ ಧರ್ಮವನ್ನು ಸಾರುತ್ತ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಬೆಳೆಯುತ್ತಿರುವ ಪೀಠವಾಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ತುರುವನಹಳ್ಳಿ ರೇಣುಕಪ್ಪ, ರಾಜಣ್ಣ, ಸಿದ್ದಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿದರು.