ಹಿಂದೂ ಧರ್ಮಕ್ಕೆ ವೀರಶೈವ ಸಿದ್ಧಾಂತವೇ ಪ್ರವೇಶದ್ವಾರ

KannadaprabhaNewsNetwork |  
Published : May 02, 2026, 03:00 AM IST
ರಬಕವಿ-ಬನಹಟ್ಟಿ | Kannada Prabha

ಸಾರಾಂಶ

ಹಿಂದೂಯೇತರ ಯಾವುದೇ ಧರ್ಮಿಯರು ಹಿಂದೂ ಧರ್ಮವನ್ನು ಪ್ರವೇಶಿಸಬೇಕಾದರೇ ವೀರಶೈವ ಸಿದ್ಧಾಂತವು ಅದಕ್ಕೆ ಪ್ರಮುಖ ಪ್ರವೇಶದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹಿಂದೂಯೇತರ ಯಾವುದೇ ಧರ್ಮಿಯರು ಹಿಂದೂ ಧರ್ಮವನ್ನು ಪ್ರವೇಶಿಸಬೇಕಾದರೇ ವೀರಶೈವ ಸಿದ್ಧಾಂತವು ಅದಕ್ಕೆ ಪ್ರಮುಖ ಪ್ರವೇಶದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.

ಗ್ರೀಸ್ ದೇಶದ ರಾಜಧಾನಿ ಅಥೆನ್ಸ್‌ ನಗರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಪುನುರುತ್ಥಾನ ಶೃಂಗ ಸಭೆಯಲ್ಲಿ ವೀರಶೈವ ಒಂದು ಜಾಗತಿಕ ಪ್ರಜ್ಞೆ ಎಂಬ ವಿಷಯದ ಕುರಿತು ಆಶೀರ್ವಚನ ನೀಡಿದ ಅವರು, ಹಿಂದೂ ಧರ್ಮವು ಹಲವಾರು ಸಿದ್ಧಾಂತ, ಸಂಪ್ರದಾಯಗಳ ಸಮೂಹ ಸಂಸ್ಕೃತಿಯಾಗಿದ್ದು, ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ್ಮದಿಂದಲೇ ಆಯಾ ಸಂಪ್ರದಾಯಗಳನ್ನು ಪ್ರವೇಶಿಸಲು ಅವಕಾಶವಿದೆ. ಆದರೆ, ವೀರಶೈವ ಸಿದ್ಧಾಂತವು ಲಿಂಗದೀಕ್ಷೆ ಮೊದಲಾದ ಧರ್ಮ ಸಂಸ್ಕಾರಗಳನ್ನು ನೀಡುವಾಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಬಡವ, ಶ್ರೀಮಂತ, ಕರಿಯ, ಬಿಳಿಯ ಮತ್ತಿತರ ಯಾವುದೇ ಭೇದವನ್ನು ನೋಡದೇ ಸದ್ಗುಣ ಮತ್ತು ಸತ್ಕರ್ಮಗಳ ಆಧಾರದ ಮೇಲೆ ಎಲ್ಲರಿಗೂ ಅಧಿಕಾರವನ್ನು ನೀಡುವ ಮೂಲಕ ಧಾರ್ಮಿಕವಾಗಿ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ ಎಂದರು.ಸಮ್ಮೇಳನದಲ್ಲಿ ಹರಿಹರಪುರ ಮಠದ ಶ್ರೀಸ್ವಯಂ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ತಿರುಚಿ ಶ್ರೀಗಳು ಸೇರಿದಂತೆ ಭಾರತದ 10 ಕ್ಕೂ ಹೆಚ್ಚಿನ ವಿವಿಧ ಸಂಪ್ರದಾಯದ ಮಠಾಧೀಶರು ಪಾಲ್ಗೊಂಡಿದ್ದರು. ಆದಿಶಕ್ತಿಯ ಕುರಿತು ಗ್ರೀಕ್‌ನಲ್ಲಿ ಚಿತ್ರ ನಿರ್ಮಾಣ

ತಂದೆಯ ದೇಹದಲ್ಲಿ ಒಂದಾಗಿದ್ದ ಮಗನನ್ನು ತಂದೆಯಿಂದ ಬೇರ್ಪಡಿಸಿದ ತಾಯಿ, ಮಗನಿಗೆ ತಂದೆಯನ್ನು ಪರಿಚಯಿಸಿ ಅವನೊಂದಿಗೆ ಸೇರಿಸುವಂತೆ ಶಿವನಿಂದ ಜೀವಿಗಳನ್ನು ಬೇರ್ಪಡಿಸಿದ ಶಕ್ತಿಯೇ ಕೊನೆಗೆ ಅವರನ್ನು ಶಿವನೊಂದಿಗೆ ಸೇರಿಸುವ ಕಾರ್ಯವನ್ನೂ ಮಾಡುತ್ತಾಳೆ. ಆದ್ದರಿಂದ ಅಧ್ಯಾತ್ಮದಲ್ಲಿ ಶಿವನಷ್ಟೇ ಶಕ್ತಿಗೂ ಪ್ರಾಧಾನ್ಯತೆ ಇದೆ. ಇಂತಹ ಆದಿಶಕ್ತಿಯ ಮಹಿಮೆಯನ್ನು ವಿಶ್ವದಾದ್ಯಂತ ಸಾರಲು ಗ್ರೀಸ್ ಸರ್ಕಾರ ಚಿತ್ರ ನಿರ್ಮಾಣಕ್ಕೆ ₹120 ಕೋಟಿ ಅನುದಾನ ನೀಡಲು ಮುಂದಾಗಿದೆ.ಆ ಕಾರ್ಯಕ್ಕೆ ಚಾಲನೆ ನೀಡಲು ಭಾರತದಿಂದ ಎಲ್ಲ ಸಂಪ್ರದಾಯದ ಸಂತರ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ ಹರಿಹರಪುರದ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಬೆಂಗಳೂರು ಕೈಲಾಸಾಶ್ರಮದ ಮಹಾಮಂಡಲೇಶ್ವರ ಜಯೇಂದಪುರಿ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ದೆಹಲಿ ಅಕ್ಷರ ಧಾಮದ ಮಹಾಮಹೋಪಾಧ್ಯಾಯ ಭದ್ರೇಶದಾಸ ಸ್ವಾಮೀಜಿ, ದೆಹಲಿಯ ಆಚಾರ್ಯ ಡಾ.ಲೋಕೇಶ ಮುನಿಜೀ, ಪ್ರಯಾಗರಾಜ ನಿರ್ಮಲ ಅಖಾಡಾದ ಜ್ಞಾನಸಿಂಗ ಮಹಾರಾಜ, ಅಮೃತಸರದ ಸಹಜದೀಪ ಸಿಂಗ ಮಹಾರಾಜ ಮತ್ತು ಬೌದ್ಧ ಸಂಪ್ರದಾಯದ ಖೇಮಚಾರ ಭಿಕ್ಕುಜಿ ಇವರು ಇಭಿನ್ನ ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಿದರು.ದೇವಿ ಮಹಾತ್ಮ್ಯ ಚಿತ್ರ ನಿರ್ಮಾಪಕ, ನಿರ್ದೇಶಕ ತಂಡದ ಮುಖ್ಯಸ್ಥರಾದ ಮನು ಕುಮಾರ, ಶಶಾಂಕ ಆಚಾರ್ಯ, ಅಭಿಷೇಕ ರುದ್ರಮೂರ್ತಿ, ಆಕಾಶ ವಿಶ್ವಾಮಿತ್ರ ಮುಂತಾದವರು ಉಪಸ್ಥಿತರಿದ್ದರು.

ಜಗತ್ತಿನ ತತ್ವಜ್ಞಾನದ ತವರು ಎನಿಸಿಕೊಂಡಿರುವ ಗ್ರೀಸ್ ನೆಲದಲ್ಲಿ, ವಿಶ್ವಗುರು ಎನಿಸಿರುವ ಭಾರತೀಯ ತತ್ವಜ್ಞಾನದ ಕುರಿತು ಚಿಂತನ-ಮಂಥನ ನಡೆಸುತ್ತಿರುವುದು ಒಂದು ಅಪರೂಪದ ಸಂದರ್ಭ. ಭೌಗೋಳಿಕವಾಗಿ ಗ್ರೀಕ್ ಮತ್ತು ಭಾರತ ಬಹಳ ದೂರದ ದೇಶಗಳಾದರೂ, ತತ್ವಜ್ಞಾನದ ದೃಷ್ಟಿಯಿಂದ ಬಹಳಷ್ಟು ಹತ್ತಿರದಲ್ಲಿವೆ.

-ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹಸಿವಿದ್ದಾಗ ಒಕ್ಕಲುತನ ಪ್ರಗತಿ ಸಾಧ್ಯ
ಸಣ್ಣ ನೀರಾವರಿ ಯೋಜನೆ ದೇಶಕ್ಕೆ ಮಾದರಿ