ಮಹಾಸಭಾದ ಅಧ್ಯಕ್ಷ ಶಾಮನೂರು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ವೀರಶೈವ ಲಿಂಗಾಯತ ಸಮುದಾಯ ಯಾಕೆ ಕವಲು ದಾರಿಯಲ್ಲಿದೆಯೆಂಬುದನ್ನು ಸ್ವಯಂ ಪ್ರೇರಿತರಾಗಿ ನಾವೇ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸಂಘಟನಾತ್ಮಕವಾಗಿ ಸಮಾಜ ಸಂಘಟಿತಸಬೇಕಾದ ತುರ್ತು ಅಗತ್ಯವಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾ ಭವನದಲ್ಲಿ ಮೂರನೇ ಬಾರಿಗೆ ಅಭಾವೀಲಿಂಮ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಸಂಘಟಿಸುವ ತುರ್ತು ಅಗತ್ಯವನ್ನು ವೀರಶೈವ ಲಿಂಗಾಯತ ಸಮಾಜ ಬಾಂಧವರು ಅರಿಯಬೇಕು ಎಂದರು.
ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಒಗ್ಗೂಡಿಸಲೆಂದೇ ಮಹಾಸಭಾ ಸ್ಥಾಪನೆಯಾಗಿದೆ. ಅಂಗೈಯಲ್ಲಿ ಲಿಂಗ ಹಿಡಿದು, ಪೂಜಿಸುವವರೇ ಲಿಂಗಾಯತರು ಎಂಬ ಮನೋಭಾವನೆಯಿಂದ ಅಂತಹವರೆಲ್ಲಾ ನಮ್ಮ ಸಮಾಜದವರೆಂದು ಒಗ್ಗೂಡಬೇಕು ಎಂದರು.
ಸನ್ಮಾನಿತರಾದ ಮಹಾಸಭಾಗೆ ಮೂರನೇ ಬಾರಿಗೆ ಪುನರಾಯ್ಕೆಯಾದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸರ್ಕಾರ ಹಿಂದೆ ಜಾತಿ ಗಣತಿ ಕೈಗೊಂಡಾಗ 2 ಕೋಟಿ ಜನಸಂಖ್ಯೆ ಹೊಂದಿದ್ದ ನಮ್ಮ ಸಮಾಜವನ್ನು ಅದಕ್ಕಿಂತ ಅರ್ಧಕ್ಕೆ ಕಡಿಮೆ ಮಾಡಿ, ತೋರಿಸುವ ಮೂಲಕ ಅಲ್ಪಸಂಖ್ಯಾತರಾಗಿ ಮಾಡಲಾಗಿದೆ ಎಂದರು.
ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್.ಗಣೇಶ, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ, ಜಿಲ್ಲಾಧ್ಯಕ್ಷ ಐಗೂರು ಸಿ.ಚಂದ್ರಶೇಖರ, ರಾಷ್ಟ್ರೀಯ ಮಹಿಳಾ ಘಟಕದ ನೂತನ ಅಧ್ಯಕ್ಷೆ ವೀಣಾ ಕಾಶೆಪ್ಪನವರ್, ಶಾಸಕ ಡಿ.ಜಿ.ಶಾಂತನಗೌಡ, ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ಚಿಂತಕ ಚಟ್ನಹಳ್ಳಿ ಮಹೇಶ, ಎಸ್.ಜಿ.ಉಳುವಯ್ಯ, ತಾಲೂಕು ಅಧ್ಯಕ್ಷ ಶಂಭು ಎಸ್.ಉರೇಕೊಂಡಿ, ಶಶಿಕಲಾ ಮೂರ್ತಿ, ನಿರ್ಮಲಾ ಸುಭಾಷ್, ಪುಷ್ಪಾ ವಾಲಿ, ಇತರರು ಇದ್ದರು.
ಡಾ.ಶಾಮನೂರು ಶಿವಶಂಕರಪ್ಪ, ರಾಷ್ಟ್ರೀಯ ಅಧ್ಯಕ್ಷ,
ಯುವ ಜನರಿಗೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಇಷ್ಟಲಿಂಗ ಪೂಜೆ ತರಬೇತಿ ಮೂಲಕ ಆಧ್ಯಾತ್ಮಿಕತೆ, ಧ್ಯಾನದ ಮೂಲಕ ಒಳ್ಳೆಯ ಸಂಸ್ಕಾರ, ಮಾನಸಿಕ ದೃಢತೆ ಬಿತ್ತಲಾಗುವುದು. ಮುಂದಿನ ಬಸವ ಜಯಂತಿಗೆ ತರಬೇತಿ ಆರಂಭವಾಗಲಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ