ಬ್ಯಾಡಗಿ: ರಾಜ್ಯದ ಬಹುತೇಕ ಜನರಿಗೆ ಅನ್ನ, ಶಿಕ್ಷಣ, ಉದ್ಯೋಗ ನೀಡುವ ಮೂಲಕ ಉದಾರತೆ ತೋರುತ್ತಿದೆ. ಆದರೆ ನಮ್ಮಲ್ಲಿರುವ ಅಭಿಮಾನದ ಶೂನ್ಯತೆಯಿಂದ ರಾಜ್ಯದಲ್ಲಿ 3 ಕೋಟಿಗೂ ಅಧಿಕ ವೀರಶೈವ ಲಿಂಗಾಯತ ಸಮಾಜ ಅಲ್ಪ ಸಂಖ್ಯಾತರಂತೆ ಕಾಣುತ್ತಿದ್ದೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಹಮ್ಮಿಕೊಂಡಿದ್ದ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಅನ್ನ, ಶಿಕ್ಷಣ, ಉದ್ಯೋಗ ಕೊಟ್ಟಿದ್ದೇವೆ: ವೀರಶೈವ ಲಿಂಗಾಯತ ಸಮಾಜದ ಜನರು ಸೇರಿದಂತೆ ಮಠಮಾನ್ಯಗಳು ಇಂದಿಗೂ ಅನ್ನ, ಶಿಕ್ಷಣ, ಉದ್ಯೋಗ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಲಿಂ.ಹಾನಗಲ್ಲ ಕುಮಾರೇಶ್ವರ ಶ್ರೀಗಳು 1903ರಲ್ಲಿ ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆ ರಚನೆಯಾದ ಬಳಿಕ, ತುಮಕೂರಿನ ಸಿದ್ದಗಂಗಾಮಠ, ಚಿತ್ರದುರ್ಗದ ಮುರುಘ ರಾಜೇಂದ್ರಮಠ, ಮೈಸೂರಿನ ಸುತ್ತೂರಮಠ, ಸಿರಿಗೆರೆಯ ತರಳಬಾಳು ಮಠ, ಬಾಳೆಹೊನ್ನೂರಿನ ರಂಭಾಪುರಿಪೀಠ, ಶಾಮನೂರ ಶಿವಶಂಕರಪ್ಪ ಅವರ ಬಾಪೂಜಿ ಸೇರಿದಂತೆ ಸಾವಿರಾರು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೇ ಎಡೆಯೂರ ತೋಂಟದ ಸಿದ್ದಲಿಂಗೇಶ್ವರಮಠ ಸೇರಿದಂತೆ ನೂರಾರು ಮಠಗಳು ಅನ್ನ ದಾಸೋಹ ನೀಡುತ್ತಿವೆ ಎಂದರು.
ಸಮಾಜಕ್ಕಾಗಿ ಬದುಕಬೇಕು: ವೀರಶೈವ ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದೇವೆ, ಸಮಾಜದಿಂದ ಎಲ್ಲವನ್ನೂ ಪಡೆದುಕೊಂಡಿದ್ದೇವೆ ಹುಟ್ಟಿದ ಸಮಾಜಕ್ಕಾಗಿ ನಮ್ಮದೊಂದು ಕೊಡುಗೆಯಿರಲಿ, ಎಲ್ಲ ತಾಲೂಕು ಘಟಕಗಳು ಕನಿಷ್ಠ 10 ಸಾವಿರ ಜನರ ಸದಸ್ಯತ್ವ ಮಾಡುವಂತೆ ಸೂಚಿಸಿದ್ದೇವೆ, ಅದರಲ್ಲಿ ಶಿಕ್ಷಣ ಸಮಿತಿ, ನ್ಯಾಯ ಸಮಿತಿ, ಆರ್ಥಿಕ ಸಮಿತಿಗಳನ್ನು ರಚಿಸುವ ಮೂಲಕ ಸಮಾಜದ ಜನರ ನಡುವೆ ವ್ಯಾಜ್ಯಗಳು ಬಂದಲ್ಲಿ ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತದಂತೆ ನೋಡಿಕೊಳ್ಳಲಾಗುವುದು ಎಂದರು.ಅಪಾಯದ ಅಂಚಿಗೆ ತಲುಪಿದೆ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಸಮಾಜದ ಜನರ ಮೂಲವೃತ್ತಿ ಕೃಷಿ, ಆದರೆ ಇತ್ತೀಚೆಗೆ ಉದ್ದಿಮೆ ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪಳಗಿದ್ದಾರೆ. ಆದರೆ, ಒಳಪಂಗಡಗಳಲ್ಲಿರುವ ಭಿನ್ನಾಭಿಪ್ರಾಯದಿಂದ ವೀರಶೈವ ಲಿಂಗಾಯತ ಸಮಾಜ ಅಪಾಯದ ಅಂಚಿಗೆ ತಲುಪಿದೆ ಎಂದರು.
ಅವಕಾಶಗಳು ಸಿಗುತ್ತಿಲ್ಲ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನಮ್ಮಲ್ಲಿ ಭಿನ್ನಾಭಿಪ್ರಾಯದಿಂದ ಇಂದು ಅವಕಾಶಗಳು ಸಿಗುತ್ತಿಲ್ಲ. ಈ ಹಿಂದೆ ಏಳೆಂಟು ಜನ ಲಿಂಗಾಯತರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಗಟ್ಟಿಯಾಗಿ ಧ್ವನಿ ಎತ್ತದಿದ್ದರೆ ಇನ್ಮುಂದೆ ಲಿಂಗಾಯತ ಮುಖಂಡರು ರಾಜ್ಯದ ಚುಕ್ಕಾಣಿ ಹಿಡಿಯುವುದು ಕನಸಿನ ಮಾತಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ನೆರವೇರಿತು.ಬನ್ನಿ ಒಗ್ಗಟ್ಟಾಗೋಣ:ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತ ಪಂಗಡಗಳು ಛಿದ್ರವಾಗಿವೆ, ಸಮುದಾಯದಲ್ಲಿ ತುಳಿದು ಬದುಕುವರಿದ್ದಾರೆ. ಇದಕ್ಕೆ ಕಡಿವಾಣ ಆಗಬೇಕು ಅವರೆಲ್ಲರನ್ನು ಮೆಟ್ಟಿ ನಿಲ್ಲಬೇಕಾಗಿದೆ. ರಾಜ್ಯದಲ್ಲಿರುವ ಎಲ್ಲ ಘಟಕಗಳನ್ನು ಮುಖ್ಯವಾಹಿನಿಗೆ ತರಲು ನಿರಂತರ ಸಂಘಟನಾತ್ಮಕ ಚಟುವಟಿಕೆಗಳು ನಡೆಸಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಡಾ. ಪ್ರೇಮಾನಂದ ಲಕ್ಕಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಯೋಗಿ ದೇವರು, ರಾಚಯ್ಯನವರು ಓದಿಸೋಮಠ ಸಾನಿಧ್ಯ ವಹಿಸಿದ್ದರು. ವಿಶ್ವನಾಥ ಅಂಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎಮ್.ಎಸ್. ಕೋರಿಶೆಟ್ಟರ, ಗಂಗಣ್ಣ ಎಲಿ, ಶಂಕರಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಪೂರ್ವಿಮಠ, ಭಾರತಿ ಜಂಬಗಿ, ಶಂಭು ಚಕ್ಕಡಿ, ಮಾಲತೇಶ ವೀರಾಪುರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಅತಿಥಿಗಳಾಗಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕೆ.ಜಿ. ಖಂಡೇಬಾಗೂರ, ಎಂ.ಎಸ್. ಹೊಂಬರಡಿ ಎಸ್.ಎಲ್. ತೆಂಬದ, ಚಂದ್ರಣ್ಣ ಶೆಟ್ಟರ, ವಿ.ವಿ. ಹುಣಸಿಕಟ್ಟಿ, ಮಲ್ಲಿಕಾರ್ಜುನ ಬಳ್ಳಾರಿ, ವಾಮದೇವಪ್ಪ, ಉಮೇಶ ಬಡ್ಡಿ, ರಮೇಶ ಮೋಟೆಬೆನ್ನೂರ, ಮಹೇಶ್ವರಿ ಪಸಾರದ, ಉಮಾಮಠದ ಇನ್ನಿತರರಿದ್ದರು. ಶಂಭು ಮಠದ ಸ್ವಾಗತಿಸಿದರು. ಎ.ಟಿ. ಪೀಠದ ಹಾಗೂ ಗಾಯತ್ರಿ ಸಾಲ್ಮನಿ ಕಾರ್ಯಕ್ರಮ ನಿರ್ವಹಿಸಿದರು.