ಕನ್ನಡಪ್ರಭ ವಾರ್ತೆ ಬೆಂಗಳೂರುಗೌರವಯುತವಾಗಿ ಮನೆಯಲ್ಲಿದ್ದ ನಿಮ್ಮ ಮಡದಿಯನ್ನು ಹೊರಗೆ ತರುವ ಕೆಲಸ ಮಾಡಿದವರು ವಿರೋಧ ಪಕ್ಷದವರಲ್ಲ. ಅದು ನೀವೇ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ನಿತ್ಯ ವೈಫಲ್ಯ ಅನುಭವಿಸುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ‘ನನ್ನನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿಕೆ ನೀಡುತ್ತಾರೆ. ಸರ್ಕಾರ ಮಾತ್ರ ಹಗರಣಗಳ ಸುತ್ತ ಗಿರಕಿ ಹೊಡೆಯುತ್ತಿದೆ ಲೇವಡಿ ಮಾಡಿದರು.ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ 38 ಶಾಸಕರಿದ್ದು ಕಾಂಗ್ರೆಸ್ ಸಹಕಾರ ನೀಡದಿದ್ದರೂ 14 ತಿಂಗಳು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದೇನೆ. ಕೊಟ್ಟ ಕುದುರೆ ಏರಲರಿಯದವರು ಎಂದು ನನ್ನನ್ನು ಹಂಗಿಸುತ್ತಾರೆ. ನನಗೆ ಯಾವ ಕುದುರೆ ಕೊಟ್ಟಿದ್ದರು. ಈಗ ಬಹುಮತವಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು 15 ತಿಂಗಳು ಮುಖ್ಯಮಂತ್ರಿಯಾಗಿ ಏನೆಲ್ಲಾ ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.
ರಾಜಕೀಯ ಲಾಭಕ್ಕೆ ಜಾತಿ ಗಣತಿ:ಮಾತೆತ್ತಿದರೆ ನಾನು ಅಹಿಂದ ಪರ ಎನ್ನುತ್ತೀರಿ. ಆದರೆ ಅಹಿಂದ ವರ್ಗಕ್ಕೆ ನೀವು ಏನು ಮಾಡಿದ್ದೀರಿ. ವಾಲ್ಮೀಕಿ ಹಗರಣದಲ್ಲಿ ಹಣ ಲೂಟಿ ಹೊಡೆದಿರುವುದು ನಿಮಗೆ ಗೊತ್ತಿರಲಿಲ್ಲವೇ. ಇಷ್ಟು ದಿವಸ ಜಾತಿ ಗಣತಿ ವರದಿಯ ಅನುಷ್ಠಾನಕ್ಕೆ ಮುಂದಾಗದವರು ಈಗ ರಾಜಕೀಯ ಲಾಭಕ್ಕೆ ಜಾತಿ ಗಣತಿ ವರದಿಯ ಅನುಷ್ಠಾನದ ಮಾತನ್ನಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಮಳೆ ಅನಾಹುತ:ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಂದಿದ್ದರೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿಲ್ಲ. ಆದರೆ ತಮಿಳುನಾಡಿಗೆ ನೀರು ಹರಿಸಿದ್ದೀರಿ. ಶನಿವಾರ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಸಾವಿರಾರು ಜನ ಜಾಗರಣೆ ಮಾಡಿದ್ದಾರೆ. ರಾಜ್ಯಾದ್ಯಂತ ಬೆಳೆ ಹಾನಿ ಸಂಭವಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಸೇರಿದಂತೆ ಯಾವುದೇ ಸಚಿವರಿಗೆ ಸಮಸ್ಯೆ ಪರಿಹರಿಸುವ ಚಿಂತನೆ ಇಲ್ಲ ಎಂದು ಟೀಕಿಸಿದರು.