ದಾವಣಗೆರೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲಲು ವೀರಶೈವ ಲಿಂಗಾಯತರ ಸಂಕಲ್ಪ

KannadaprabhaNewsNetwork |  
Published : Mar 02, 2025, 01:16 AM ISTUpdated : Mar 02, 2025, 07:48 AM IST
1ಕೆಡಿವಿಜಿ10-ಬೆಂಗಳೂರಿನಲ್ಲಿ ಮಾ.4ರ ವೀರಶೈವ ಲಿಂಗಾಯತ ಸಮಾಜದ ಸಮಾವೇಶದ ಪೂರ್ವಭಾವಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಮುಖಂಡರ ಸಭೆಯನ್ನು ಹಿರಿಯ ಮುಖಂಡರಾದ ಎಸ್.ಎ.ರವೀಂದ್ರನಾಥ, ಮಾಡಾಳ್ ವಿರುಪಾಕ್ಷಪ್ಪ, ಎಂ.ಪಿ.ರೇಣುಕಾಚಾರ್ಯ, ಬಳ್ಳಾರಿ ವಿರುಪಾಕ್ಷಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

 ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಸಂದೇಶ ನೀಡಲು ವೀರಶೈವ ಲಿಂಗಾಯತ ಮಹಾಸಂಗಮ ಪೂರ್ವ ಸಿದ್ಧತಾ ಸಭೆ ತೀರ್ಮಾನ ಕೈಗೊಂಡಿದೆ.

  ದಾವಣಗೆರೆ : ದಕ್ಷಿಣ ಭಾರತದಲ್ಲೇ ಮೊದಲಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ, ರಾಜ್ಯಾದ್ಯಂತ ಬೇರು ಮಟ್ಟದಿಂದ ಪಕ್ಷ ಸಂಘಟಿಸಿದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಸಂದೇಶ ನೀಡಲು ವೀರಶೈವ ಲಿಂಗಾಯತ ಮಹಾಸಂಗಮ ಪೂರ್ವ ಸಿದ್ಧತಾ ಸಭೆ ತೀರ್ಮಾನ ಕೈಗೊಂಡಿದೆ.

ನಗರದ ಶ್ರೀನಿಧಿ ಕನ್ವೆನ್ಷನ್‌ ಸಭಾಂಗಣದಲ್ಲಿ ಶನಿವಾರ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ವೀರಶೈವ ಲಿಂಗಾಯತ ಮಹಾ ಸಂಗಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಕ್ಷಕ್ಕೆ, ರಾಜ್ಯಕ್ಕೆ ಯಡಿಯೂರಪ್ಪನವರ ಕೊಡುಗೆಯನ್ನು ನಾವ್ಯಾರೂ ಮರೆಯಬಾರದು. ಈಗಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ಯಡಿಯೂರಪ್ಪ, ವಿಜಯೇಂದ್ರ ಪರವಾಗಿ ನಿಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ತೀರ್ಮಾನಕ್ಕೆ ಬಂದಿತು.

ಸಭೆಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಇವತ್ತು ಬಿಜೆಪಿ ಇಷ್ಟು ಬಲಾಢ್ಯವಾಗಿರಲು, ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ದಶಕಗಳ ಹೋರಾಟವೇ ಕಾರಣ. ಆದರೆ, ಕೆಲವರು ಯಡಿಯೂರಪ್ಪ ಕುಟುಂಬದ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದು, ಅಂತಹವರಿಗೂ ಸಮಾವೇಶದ ಮೂಲಕ ತಕ್ಕ ಪಾಠ ಕಲಿಸಬೇಕು. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪಕ್ಷದ ಉಳಿವು, ಬೆಳವಣಿಗೆಗಾಗಿ ನಾವೆಲ್ಲಾ ವೀರಶೈವ ಲಿಂಗಾಯತರು ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ವೀರಶೈವ ಲಿಂಗಾಯತರು ಹಿಂದೆ ಯಾವ ರೀತಿ ಬಿಜೆಪಿ ಪರ ನಿಂತಿದ್ದರೋ, ಅದೇ ರೀತಿ ಪಕ್ಷದ ಪರ ನಿಲ್ಲಬೇಕು. ರಾಜ್ಯದ ಹಿರಿಯರು ನಮ್ಮೆಲ್ಲರ ನಾಯಕರಾದ ಯಡಿಯೂರಪ್ಪನವರ ಕೈಬಲಪಡಿಸಲು ಅವಿರತವಾಗಿ ಶ್ರಮಿಸಬೇಕು. ನಮ್ಮೆಲ್ಲರ ಗುರಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪನವರ ರಾಜಕೀಯ ಮಾರ್ಗದರ್ಶನ, ಅನುಭವ ಅತ್ಯಗತ್ಯ. ವಿಜಯೇಂದ್ರ ಸಾರಥ್ಯದ ಕಾರ್ಯ ವೈಖರಿ ನೋಡಿದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದರು.

ಮಾ.4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವುದು ವೀರಶೈವ ಲಿಂಗಾಯತರ ಬೃಹತ್ ಸಮಾವೇಶ. ಈ ಸಮಾವೇಶದ ಬಗ್ಗೆ ನನಗೆ ಹಲವು ಮಠಾಧೀಶರು ವಾಟ್ಸಪ್ ಕರೆ ಮಾಡಿ ಮಾತನಾಡಿದ್ದಾರೆ. ರೇಣುಕಾಚಾರ್ಯ ನೀನು ಹೆಜ್ಜೆ ಮುಂದಿಟ್ಟಿದ್ದೀಯಾ. ಯಾವುದೇ ಕಾರಣಕ್ಕೂ ಹಿಂದಡಿ ಇಡಬೇಡ ಎಂದಿದ್ದಾರೆ. ನಿಮ್ಮ ಜೊತೆಗೆ ನಾವೆಲ್ಲಾ ಮಠಾಧೀಶರು ಇರುತ್ತೇವೆಂಬ ಭರವಸೆಯನ್ನೂ ತುಂಬಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ನನಗೆ ಕರೆ ಮಾಡಿ, ಸಮಾವೇಶ ಮಾಡಬೇಡಿ ಅಂದಿದ್ದರು. ಆದರೆ, ಇದು ಸಮಾಜದ ಒಗ್ಗಟ್ಟಿಗಾಗಿ, ಸಮಾಜದಲ್ಲಿರುವ ಮಲ್ಲಪ್ಪ ಶೆಟ್ಟರಂತಹವರಿಗೆ ಎಚ್ಚರಿಕೆ ನೀಡುವ ಸಮಾವೇಶ ಎಂಬುದಾಗಿ ಹೇಳಿದ್ದೆ ಎಂದುತಿಳಿಸಿದರು.

ಹಿಂದೆ ನನಗೆ ಹೊನ್ನಾಳಿ ಕ್ಷೇತ್ರದ ಟಿಕೆಟ್ ನೀಡಿದ ನಮ್ಮ ನಾಯಕರಾದ ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವವಿದೆ. ಬಿಎಸ್‌ವೈರಂತಹ ನಾಯಕರನ್ನು ನಾವು ಒಂದು ಸಮಾಜಕ್ಕೆ ಸೀಮಿತಗೊಳಿಸುತ್ತಿಲ್ಲ. ಯಡಿಯೂರಪ್ಪ ಜಾತ್ಯತೀತ ನಾಯಕರು. ಆದರೆ, ಇಡೀ ವೀರಶೈವ ಲಿಂಗಾಯತ ಸಮಾಜವೇ ಬಿಎಸ್‌ವೈ ಪರ ಇದೆ. ಇಡೀ ಸಮಾಜದ ಬೆಂಬಲ ಯಡಿಯೂರಪ್ಪಗೆ ಇದೆ ಎಂದು ತೋರಿಸಲು ಈ ಸಮಾವೇಶ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಭೆಗೆ ಮುನ್ನ ಶಾಬನೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮುಖಂಡರು ತೆರಳಿ, ಪೂಜೆ ಸಲ್ಲಿಸಿದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಝ, ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ವಿರುಪಾಕ್ಷಪ್ಪ ಬಳ್ಳಾರಿ, ಯುವ ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಅಶೋಕ ಪೂಜಾರಿ, ರಾಜು ವೀರಣ್ಣ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!