ಬೆಟ್ಟಿಂಗ್‌ ದಂಧೆ: ಕಾಂಗ್ರೆಸ್‌ ಶಾಸಕ ಪಪ್ಪಿ ಬಂಧನ, ₹12 ಕೋಟಿ ಕ್ಯಾಷ್‌ ಜಪ್ತಿ

KannadaprabhaNewsNetwork |  
Published : Aug 24, 2025, 02:00 AM ISTUpdated : Aug 24, 2025, 07:26 AM IST
ಇ.ಡಿ.ಅಧಿಕಾರಿಗಳು ಜಪ್ತಿ ಮಾಡಿದ ನಗದು, ಆಭರಣಗಳು ಹಾಗೂ ಕ್ರೆಡಿಟ್‌, ಡೆಬಿಟ್‌ ಸೇರಿ ಇತರೆ ಕಾರ್ಡ್‌ಗಳು | Kannada Prabha

ಸಾರಾಂಶ

ಅಕ್ರಮ ಆನ್‌ಲೈನ್‌ ಹಾಗೂ ಆಫ್‌ ಲೈನ್‌ ಬೆಟ್ಟಿಂಗ್‌ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದು, ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರನ್ನು ಸಿಕ್ಕಿಂ ರಾಜ್ಯದ ರಾಜಧಾನಿ ಗ್ಯಾಂಗ್ಟಕ್‌ನಲ್ಲಿ ಶನಿವಾರ ಬಂಧಿಸಿದ್ದಾರೆ.

  ಬೆಂಗಳೂರು :  ಅಕ್ರಮ ಆನ್‌ಲೈನ್‌ ಹಾಗೂ ಆಫ್‌ ಲೈನ್‌ ಬೆಟ್ಟಿಂಗ್‌ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದು, ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರನ್ನು ಸಿಕ್ಕಿಂ ರಾಜ್ಯದ ರಾಜಧಾನಿ ಗ್ಯಾಂಗ್ಟಕ್‌ನಲ್ಲಿ ಶನಿವಾರ ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಶುಕ್ರವಾರ ನಡೆದ ಇ.ಡಿ.ದಾಳಿ ವೇಳೆ ಕೆ.ಸಿ.ವೀರೇಂದ್ರ ಮನೆಯಲ್ಲಿರಲಿಲ್ಲ. ಕೆ.ಸಿ.ವೀರೇಂದ್ರ ಅವರು ತನ್ನ ಸಹಚರರೊಂದಿಗೆ ಕ್ಯಾಸಿನೋ ಗುತ್ತಿಗೆ ಪಡೆಯುವ ಸಂಬಂಧ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ಗೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇದರ ಬೆನ್ನಲ್ಲೇ ಕೆ.ಸಿ.ವೀರೇಂದ್ರ ಅವರನ್ನು ಗ್ಯಾಂಗ್ಟಕ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಶನಿವಾರ ಅಧಿಕೃತವಾಗಿ ಕೆ.ಸಿ.ವೀರೇಂದ್ರ ಅವರನ್ನು ಬಂಧಿಸಿರುವ ಇ.ಡಿ.ಅಧಿಕಾರಿಗಳು ಬಳಿಕ ಗ್ಯಾಂಗ್ಟಕ್‌ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ಯವ ಸಂಬಂಧ ನ್ಯಾಯಾಲಯದಿಂದ ಟ್ರಾನ್ಸಿಟ್‌ ವಾರೆಂಟ್‌ ಪಡೆದು ವಿಮಾನದ ಮೂಲಕ ಬೆಂಗಳೂರಿಗೆ ಕರೆತರುವ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಬಳಿಕ ಆರೋಪಿ ಕೆ.ಸಿ.ವೀರೇಂದ್ರ ಅವರನ್ನು ಇ.ಡಿ.ಕಚೇರಿಗೆ ಕರೆದೊಯ್ದು ಭಾನುವಾರ ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದಾರೆ. ನಂತರ ಹೆಚ್ಚಿನ ವಿಚಾರಣೆ ಸಂಬಂಧ ಅವರನ್ನು ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಇ.ಡಿ.ಮೂಲಗಳು ತಿಳಿಸಿವೆ.

31 ಸ್ಥಳಗಳಲ್ಲಿ ಇ.ಡಿ.ದಾಳಿ:

ಕೆ.ಸಿ.ವೀರೇಂದ್ರ, ಆತನ ಸಹೋದರರು ಹಾಗೂ ಪಾಲುದಾರರ ಮನೆಗಳು ಹಾಗೂ ಕಚೇರಿಗಳು ಸೇರಿ ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು ನಗರ, ಹುಬ್ಬಳ್ಳಿ, ಜೋಧ್‌ಪುರ, ಮುಂಬೈ, ಗೋವಾ ಸೇರಿ ರಾಜ್ಯ ಹಾಗೂ ಹೊರರಾಜ್ಯಗಳ 31 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಶುಕ್ರವಾರ ನಸುಕಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಶನಿವಾರವೂ ಶೋಧ ಕಾರ್ಯ ಮುಂದುವರೆಸಿದ್ದರು. ಶೋಧ ಕಾರ್ಯದ ವೇಳೆ ಕೋಟ್ಯಂತರ ರು. ನಗದು, ವಿದೇಶಿ ಕರೆನ್ಸಿ, ಕೆ.ಜಿ.ಗಟ್ಟಲೆ ಚಿನ್ನ, ಬೆಳ್ಳಿ, ಮಹತ್ವದ ದಾಖಲೆಗಳನ್ನು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ.

ಪಪ್ಪಿ ಒಡೆತನದ 5 ಕ್ಯಾಸಿನೋಗಳ ಮೇಲೂ ದಾಳಿ:

ಕೆ.ಸಿ.ವೀರೇಂದ್ರಗೆ ಸೇರಿದ ಪಪ್ಪೀಸ್ ಕ್ಯಾಸಿನೋ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೋ, ಪಪ್ಪೀಸ್ ಕ್ಯಾಸಿನೋ ಪ್ರೈಡ್, ಓಷನ್ 7 ಕ್ಯಾಸಿನೋ, ಬಿಗ್ ಡ್ಯಾಡಿ ಕ್ಯಾಸಿನೋಗಳ ಮೇಲೂ ದಾಳಿ ನಡೆಸಿ ಶೋಧಿಸಲಾಗಿದೆ. ಆರೋಪಿ ಕೆ.ಸಿ.ವೀರೇಂದ್ರ ಕಿಂಗ್ 567, ರಾಜಾ 567 ಸೇರಿ ವಿವಿಧ ಹೆಸರುಗಳಲ್ಲಿ ಆನ್‌ಲೈನ್ ಹಾಗೂ ಆಫ್‌ ಲೈನ್‌ ಬೆಟ್ಟಿಂಗ್ ಸೈಟ್‌ ನಡೆಸುತ್ತಿರುವುದು ಇ.ಡಿ. ಅಧಿಕಾರಿಗಳ ಶೋಧದ ವೇಳೆ ಬೆಳಕಿಗೆ ಬಂದಿದೆ.

ದುಬೈನಲ್ಲಿ ಮೂರು ಕಂಪನಿ:

ಆರೋಪಿ ಕೆ.ಸಿ.ವೀರೇಂದ್ರನ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈನಲ್ಲಿ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್‌ ಎಂಬ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ಮೂರೂ ಕಂಪನಿಗಳು ಕೆ.ಸಿ.ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ. ಕೆ.ಸಿ.ತಿಪ್ಪೇಸ್ವಾಮಿ ಮತ್ತು ಸಹೋದರನ ಮಗ ಪೃಥ್ವಿ ಎನ್‌.ರಾಜ್‌ ದುಬೈನಿಂದ ಆನ್‌ಲೈನ್‌ ಗೇಮ್‌ಗಳನ್ನು ನಿರ್ವಹಿಸುತ್ತಿರುವುದು ಇ.ಡಿ. ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. 

ವಿದೇಶಿ ಕ್ಯಾಸಿನೋಗಳ ಸದಸ್ಯತ್ವ ಪತ್ತೆ

ಇ.ಡಿ.ಅಧಿಕಾರಿಗಳ ದಾಳಿ ವೇಳೆ ಆರೋಪಿ ಕೆ.ಸಿ.ವೀರೇಂದ್ರ ಬಳಿ ಎಂಜಿಎಂ ಕ್ಯಾಸಿನೋ, ಮೆಟ್ರೋಪಾಲಿಟನ್ ಕ್ಯಾಸಿನೋ, ಬೆಲ್ಲಾಜಿಯೊ ಕ್ಯಾಸಿನೋ, ಮರೀನಾ ಕ್ಯಾಸಿನೋ, ಕ್ಯಾಸಿನೋ ಜ್ಯುವೆಲ್ ಸೇರಿ ವಿದೇಶಿ ಕ್ಯಾಸಿನೋ ಸದಸ್ಯತ್ವ, ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ತಾಜ್, ಹಯಾತ್, ದಿ ಲೀಲಾ ಸೇರಿ ಹಲವು ಐಷಾರಾಮಿ ಹೋಟೆಲ್‌ಗಳ ಸದಸ್ಯತ್ವ ಕಾರ್ಡ್‌ಗಳು ಪತ್ತೆಯಾಗಿದ್ದು, ಅವುಗಳನ್ನೂ ಜಪ್ತಿ ಮಾಡಿದ್ದಾರೆ.

- ಆನ್‌ಲೈನ್‌ ಬೆಟ್ಟಿಂಗ್‌, ಅಕ್ರಮ ಹಣ ವರ್ಗ ಕೇಸ್‌

- ಶಾಸಕ, ಪಾಲುದಾರರ ಮನೆ ಶೋಧಿಸಿದ್ದ ಇ.ಡಿ.

- ರಾಜ್ಯ, ಹೊರರಾಜ್ಯಗಳಲ್ಲಿ 31 ಕಡೆ ಹುಡುಕಾಟ

- 12 ಕೋಟಿ ನಗದು ವಶಕ್ಕೆ ಪಡೆದಿದ್ದ ಅಧಿಕಾರಿಗಳು

- ಸಿಕ್ಕಿಂನಲ್ಲಿದ್ದ ಶಾಸಕನ ವಶಕ್ಕೆ ಪಡೆದು ವಿಚಾರಣೆ

- ಅಲ್ಲೇ ಶಾಸಕ ವೀರೇಂದ್ರನ ಬಂಧಿಸಿದ ಅಧಿಕಾರಿಗಳು

- ಇಂದು ಬೆಂಗಳೂರಲ್ಲಿ ಜಡ್ಜ್‌ ಮುಂದೆ ಶಾಸಕ ಹಾಜರ್‌

- ವಿಚಾರಣೆಗಾಗಿ ಶಾಸಕನ ವಶಕ್ಕೆ ಕೇಳಲಿರುವ ಇ.ಡಿ.

ಇ.ಡಿ. ದಾಳಿ ವೇಳೆ ಸಿಕ್ಕಿದೇನು?ಇ.ಡಿ. ಅಧಿಕಾರಿಗಳು ಸುಮಾರು 12 ಕೋಟಿ ನಗದು, ಸುಮಾರು 6 ಕೋಟಿ ರು. ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿವಸ್ತುಗಳು, 1 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿ, 003 ಫ್ಯಾನ್ಸಿ ನೋಂದಣಿ ಸಂಖ್ಯೆಯ 4 ಕಾರುಗಳನ್ನು ಜಪ್ತಿ ಮಾಡಿದ್ದಾರೆ. ವೀರೇಂದ್ರ ಅವರ ಸಹೋದರ ಕೆ.ಸಿ.ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್‌.ರಾಜ್‌ ಅವರ ಬಳಿ ಕೋಟ್ಯಂತರ ರು. ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಂತೆಯೇ ವೀರೇಂದ್ರಗೆ ಸೇರಿದ 17 ಬ್ಯಾಂಕ್‌ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‌ಗಳು ಕೂಡ ಜಪ್ತಾಗಿವೆ.

PREV
Read more Articles on

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!