ಗದಗ: ಗದುಗಿನ ವೀರೇಶ್ವರ ಪುಣ್ಯಾಶ್ರಮ ನಾಡಿನ ಅಂಧ, ಅನಾಥ, ವಿಕಲಚೇತನ ಮಕ್ಕಳಿಗೆ ಅನ್ನದಾಸೋಹ, ಸಂಗೀತ-ಜ್ಞಾನ ದಾಸೋಹ ನೀಡುವ ಮೂಲಕ ಅವರಲ್ಲಿ ಚೈತನ್ಯ ತುಂಬಿ ಸ್ವಾವಲಂಭಿ ಬದುಕು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ಹೇಳಿದರು.
ಸಂಗೀತ, ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಕ್ಕೆ ವೀರೇಶ್ವರ ಪುಣ್ಯಾಶ್ರಮ ಅನುಪಮ ಸೇವೆ ಸಲ್ಲಿಸಿದೆ.ಆಶ್ರಮದಲ್ಲಿ ಗುರುಗಳಾದ ಪಂ.ಪಂಚಾಕ್ಷರ ಗವಾಯಿಗಳವರ, ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯತ್ವ ಪಡೆದು ಅವರ ಮಾರ್ಗದರ್ಶನದಲ್ಲಿ ಸಂಗೀತ ವಿದ್ಯಾಭ್ಯಾಸಗೈದ ಸಾವಿರಾರು ಕಲಾವಿದರು ಉನ್ನತ ಹುದ್ದೆಯಲ್ಲಿ, ಉನ್ನತ ಸಾಧನೆ ಮಾಡಿದ ಮಹಾನ್ ಕಲಾವಿದರಾಗಿ ಭವ್ಯ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.
ಈ ವೇಳೆ ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರಿ ಹೆಡಿಗ್ಗೊಂಡ, ಗಾನಯೋಗಿ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ, ಸಮಿತಿಯ ಸದಸ್ಯ ಎಂ.ಜಿ.ಗುರುಸಿದ್ಧೇಶ್ವರ ಶಾಸ್ತ್ರಿ ಬೇವೂರ, ಶರಣಯ್ಯ ಶಾಸ್ತ್ರಿ ಅಗಸಬಾಳ ಹಾಗೂ ಸಂಗಮೇಶ ಕರಡಕಲ್ ಸಂದರ್ಭೋಚಿತವಾಗಿ ಮಾತನಾಡಿದರು.ಬೆಟದಯ್ಯ ಶಾಸ್ತ್ರಿ ಹಿರೇಮ್ಯಾಗೇರಿ, ವೀರೇಶ ಗವಾಯಿ ಹಿರೇಮಠ, ಬಸವಲಿಂಗಯ್ಯ ಹಿರೇಮಠ, ವೀರಭದ್ರಪ್ಪ ಬೆಣಕಲ್ ತಂಡದಿಂದ ಜಾನಪದ ಹಾಗೂ ಸುಗಮ ಸಂಗೀತ ಜರುಗಿತು. ಶರಣಬಸವ ಶಾಸ್ತ್ರಿ ಇಲಕಲ್ಲ ನಿರೂಪಿಸಿ,ವಂದಿಸಿದರು.
ಕಾರ್ಯಕ್ರಮದಲ್ಲಿ ಆಶ್ರಮದ ವಿದ್ಯಾರ್ಥಿ ವೃಂದ, ಭಕ್ತಾಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.