ಅಕಾಲಿಕ ಮಳೆಗೆ ತರಕಾರಿ ವ್ಯಾಪಾರಸ್ಥರ ಬದುಕು ಮೂರಾಬಟ್ಟೆ: ಸೂಕ್ತ ತರಕಾರಿ ಮಾರುಕಟ್ಟೆ ಕಲ್ಪಿಸದ ಪಟ್ಟಣ ಪಂಚಾಯ್ತಿ

KannadaprabhaNewsNetwork |  
Published : Apr 01, 2026, 01:30 AM IST
31ಎಚ್ಎಸ್ಎನ್17  :ಪಟ್ಟಣದಲ್ಲಿ ಮಂಗಳವಾರ ಸುರಿದ ಬಾರಿ ಗಾಳಿ ಸಹಿತ ಮಳೆಯಲ್ಲಿ ಹಾರಿ ಹೋಗುತ್ತಿರುವ ಟಾರ್ಪಲ್ಗಳ ಮಧ್ಯೆ ತಮ್ಮ ವಸ್ತುಗಳನ್ನು ರಕ್ಷಿಸಲು ಪರದಾಡುತ್ತಿರುವ ತರಕಾರಿ ವ್ಯಾಪಾರಿಗಳು. | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿಯವರ ಬೇಜವಾಬ್ದಾರಿತನದಿಂದಾಗಿ ನಮಗೆ ವ್ಯಾಪಾರ- ವಹಿವಾಟು ನಡೆಸಲು ತೀವ್ರ ತೊಂದರೆಯಾಗುತ್ತಿದೆ. ಇದರಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿದೆ. ತಮ್ಮ ಜೀವನೋಪಾಯಕ್ಕಾಗಿ ಇದೇ ವ್ಯಾಪಾರವನ್ನು ಮೊದಲಿಂದಲೂ ನೆಚ್ಚಿಕೊಂಡು ಬಂದಿದ್ದು, ಪಂಚಾಯಿತಿಯವರ ಈ ನಡೆಯಿಂದಾಗಿ ನಾವುಗಳು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಆಲೂರು

ಪಟ್ಟಣದಲ್ಲಿ ಮಂಗಳವಾರ ಸಂಜೆ ದಿಢೀರ್ ಸುರಿದ ಅಕಾಲಿಕ ಮಳೆಯಿಂದಾಗಿ ಜನ ಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಏಕಾಏಕಿ ಸುರಿದ ಮಳೆಯಿಂದಾಗಿ ಪಟ್ಟಣದಲ್ಲಿ ತರಕಾರಿ, ಹೂ, ಹಣ್ಣು ಮುಂತಾದವುಗಳ ಬೀದಿಬದಿ ವ್ಯಾಪಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಳೆಯಿಂದಾಗಿ ತಮ್ಮ ತರಕಾರಿ ಮುಂತಾದ ವಸ್ತುಗಳನ್ನು ಕಾಪಾಡಿಕೊಳ್ಳಲು ಮಳೆಯಲ್ಲಿ ನೆನೆದುಕೊಂಡೆ ಟಾರ್ಪಲ್ ಗಳನ್ನು ಮುಚ್ಚುತ್ತಿದ್ದ ಇವರ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದ್ದು, ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಈ ಹಿಂದೆ ತಾವು ನಿರ್ಮಿಸಿಕೊಂಡಿದ್ದ ಟೆಂಟ್ ಗಳನ್ನು ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿಕೊಂಡೇ ತಮ್ಮ ಪದಾರ್ಥಗಳನ್ನು ರಕ್ಷಿಸಲು ಹರಸಾಹಸ ಪಡುವಂತಾಗಿತ್ತು.

ಈ ಹಿಂದೆ ಇದೇ ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಲಕ್ಷಾಂತರ ವೆಚ್ಚದಲ್ಲಿ ಮಾರುಕಟ್ಟೆ ಪ್ರಾಂಗಣವನ್ನು ನಿರ್ಮಿಸಲಾಗಿತ್ತು. ಕೋರೋನಾ ಸಂದರ್ಭದಲ್ಲಿ ಈ ಪ್ರಾಂಗಣಗಳನ್ನು ಒಡೆದುಹಾಕಿ ಪಟ್ಟಣ ಪಂಚಾಯಿತಿ ವತಿಯಿಂದ ತುಘಲಕ್ ದರ್ಬಾರ್ ನಡೆಸಲಾಗಿತ್ತು. ಅವುಗಳನ್ನು ಏಕೆ ಕೆಡವಿದರು ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ.

ಪಟ್ಟಣ ಪಂಚಾಯಿತಿಯವರು ಕೋರೋನಾ ಸಂದರ್ಭದಲ್ಲಿ ಒಡೆದು ಹಾಕಲಾಗಿದ್ದ ಪ್ರಾಂಗಣಗಳನ್ನು ಪುನ: ನಿರ್ಮಿಸಿ ತರಕಾರಿ, ಹೂವು ಮುಂತಾದವುಗಳ ವ್ಯಾಪಾರಿಗಳಿಗೆ ಸೂಕ್ತ ರೀತಿಯಲ್ಲಿ ವ್ಯಾಪಾರ, ವಹಿವಾಟು ನಡೆಸಲು ಅನುವು ಮಾಡಿಕೊಡದ ಕಾರಣ, ವಿಧಿ ಇಲ್ಲದೆ ವ್ಯಾಪಾರಸ್ಥರು ತಮ್ಮ ಅನುಕೂಲಕ್ಕೆ ತಕ್ಕಂತೆ ಡೇರೆಗಳನ್ನು ನಿರ್ಮಿಸಿಕೊಂಡಿದ್ದರು.

ಆದರೆ ಇತ್ತೀಚೆಗೆ ಅವುಗಳನ್ನು ಪಟ್ಟಣ ಪಂಚಾಯಿತಿಯವರು ಏಕಾಏಕಿ ತೆರವುಗಳಿಸಿ, ಅದೇ ಜಾಗದಲ್ಲಿ ಛತ್ರಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸಲು ಸೂಚಿಸಿದ್ದರು.

ಶಾಸಕರು ಕೆಲವರಿಗೆ ಛತ್ರಿಗಳನ್ನುಸಹ ವಿತರಿಸಿ ಹೋಗಿದ್ದರು.

ನೆಲದಲ್ಲಿ ತಮ್ಮ ತರಕಾರಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಬೇಸಿಗೆ ಕಾಲದಲ್ಲಿ ಏಕಾಏಕಿ ಸುರಿಯುವ ಗಾಳಿ ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳದೆ ವ್ಯಾಪಾರ ನಡೆಸಿಕೊಂಡು ಹೋಗುತ್ತಿದ್ದು, ಇದರಿಂದಾಗಿ ತೀವ್ರ ತೊಂದರೆ ಹಾಗೂ ನಷ್ಟ ಅನುಭವಿಸುವಂತಾಗಿದೆ. ಆದುದರಿಂದ ಸಂಬಂಧಪಟ್ಟವರು ಶೀಘ್ರ ಇತ್ತ ಗಮನಹರಿಸಿ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಸುಗಮವಾಗಿ ವ್ಯಾಪಾರ- ವಹಿವಾಟು ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕಾಗಿದೆ.

ಈ ಸಂಬಂಧವಾಗಿ ತರಕಾರಿ ವ್ಯಾಪಾರಿ ಇರ್ಫಾನ್‌ ಪತ್ರಿಕೆಯೊಂದಿಗೆ ಮಾತನಾಡಿ, ಪಟ್ಟಣ ಪಂಚಾಯಿತಿಯವರ ಬೇಜವಾಬ್ದಾರಿತನದಿಂದಾಗಿ ನಮಗೆ ವ್ಯಾಪಾರ- ವಹಿವಾಟು ನಡೆಸಲು ತೀವ್ರ ತೊಂದರೆಯಾಗುತ್ತಿದೆ. ಇದರಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿದೆ. ತಮ್ಮ ಜೀವನೋಪಾಯಕ್ಕಾಗಿ ಇದೇ ವ್ಯಾಪಾರವನ್ನು ಮೊದಲಿಂದಲೂ ನೆಚ್ಚಿಕೊಂಡು ಬಂದಿದ್ದು, ಪಂಚಾಯಿತಿಯವರ ಈ ನಡೆಯಿಂದಾಗಿ ನಾವುಗಳು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಶೀಘ್ರ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಈ ಹಿಂದೆ ಇದ್ದಂತೆ ವ್ಯಾಪಾರದ ಪ್ರಾಂಗಣಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿದರು.

ತರಕಾರಿ ವ್ಯಾಪಾರಿ ಚೇತನ್ ಮಾತನಾಡಿ, ಪಟ್ಟಣ ಪಂಚಾಯಿತಿಯವರು ಸೂಕ್ತ ವ್ಯವಸ್ಥೆ ಕಲ್ಪಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಈ ಸ್ಥಳದಲ್ಲಿ ಮಳೆ ಬಂದರೆ ವ್ಯಾಪಾರ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಬೇರೆ ಎಲ್ಲಾ ತಾಲೂಕುಗಳಲ್ಲೂ ಸೂಕ್ತ ತರಕಾರಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಇದ್ದ ಮಾರುಕಟ್ಟೆಯ ಪ್ರಾಂಗಣಗಳನ್ನೇ ಹೊಡೆದು ಹಾಕಿ ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಶೀಘ್ರ ಇತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹೋದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸಮಯ ಪ್ರಜ್ಞೆಯ ಅಗತ್ಯವಿದೆ: ಡೀಸಿ ಲತಾಕುಮಾರಿ
ರಥೋತ್ಸವಕ್ಕೆ ಉಸ್ತುವಾರಿ ಸಚಿವರ ಗೈರು: ಅನುದಾನ ಕೊರತೆ, ಆಡಳಿತ ವೈಫಲ್ಯಕ್ಕೆ ಶಾಸಕ ಸುರೇಶ್ ಆಕ್ರೋಶ