ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆಗೆ ವಾಹನ ನಿಷೇಧ

KannadaprabhaNewsNetwork |  
Published : May 15, 2024, 01:31 AM IST
ಮೇಲ್ಸೇತುವೆ. | Kannada Prabha

ಸಾರಾಂಶ

ಹೆಬ್ಬಾಳ ಮೇಲ್ಸೇತುವೆಗೆ ರ್ಯಾಂಪ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ನಾಗವರದಿಂದ ಹೆಬ್ಬಾಳ ಫ್ಲೈಓವರ್‌ಗೆ ಆಗಮಿಸುವ ವಾಹನಗಳಿಗೆ ನಿಷೇಧ ಹೇರಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್‌.ಪುರ ಕಡೆಯಿಂದ ಬರುವ ಅಪ್‌ ರ್‍ಯಾಂಪ್‌ ಮುಚ್ಚಿರುವುದರಿಂದ ಮಂಗಳವಾರದಿಂದ ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲ ಮಾದರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಏಪ್ರಿಲ್‌ 17ರಿಂದ ಕೆ.ಆರ್.ಪುರ ಲೂಪ್‌ ಸೇರುವ ಟ್ರ್ಯಾಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಎಲ್ಲ ಮಾದರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲ ಮಾದರಿ ವಾಹನಗಳ ಸಂಚಾರವನ್ನು ನಿಬಂಧಿಸಿ, ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಯಾವುದು ಪರ್ಯಾಯ ಮಾರ್ಗ?

*ನಾಗವಾರ (ಔಟರ್‌ರಿಂಗ್‌ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ವೃತ್ತದ ಮೂಲಕ ಸಂಚರಿಸುವ ವಾಹನಗಳು ಹೆಬ್ಬಾಳ ವೃತ್ತದಲ್ಲಿ ಮೇಲ್ಸೇತುವೆ ಕೆಳಗಿನ ರಸ್ತೆಯಿಂದ ಬಲಕ್ಕೆ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್‌ ಬಳಿ ಯೂಟರ್ನ್‌ ಪಡೆದು ಸರ್ವಿಸ್‌ ರಸ್ತೆಯಿಂದ ಹೆಬ್ಬಾಳ ಮೇಲ್ಸೇತುವೆ ರ್‍ಯಾಂಪ್‌ ಮೂಲಕ ನಗರದ ಕಡೆಗೆ ಚಲಿಸಬಹುದು. *ಕೆ.ಆರ್‌.ಪುರಂ ನಾಗವಾರದ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಐಒಸಿ ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ, ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು

*ಹೆಗಡೆನಗರ ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆವಿಕೆ ಜಕ್ಕೂರು ರಸ್ತೆಯ ಮೂಲಕ ನಗರ ಪ್ರವೇಶಿಸಬಹುದು.

*ಕೆ.ಆರ್‌.ಪುರ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಕೆಳಗಿನ ರಸ್ತೆಯಿಂದ ನೇರವಾಗಿ ಬಿಇಎಲ್‌ ವೃತ್ತ ತಲುಪಿ, ಎಡಕ್ಕೆ ತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಐಐಎಸ್ಸಿ ಮುಖಾಂತರ ಮುಂದಕ್ಕೆ ಸಾಗಬಹುದು.

*ಕೆ.ಆರ್‌.ಪುರ, ಹೆಣ್ಣೂರು, ಎಚ್‌ಆರ್‌ಬಿಆರ್‌ ಲೇಔಟ್‌, ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆ ಮುಖಾಂತರ ವಿಮಾನ ನಿಲ್ದಾಣ ತಲುಪಬಹುದು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ