ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇಂದಿನಿಂದ ಮಾರ್ಚ್ 1ರ ತನಕ ಲೋಕಕಲ್ಯಾಣಾರ್ಥವಾಗಿ ಜನ ಸಮುದಾಯದಲ್ಲಿ ಧಾರ್ಮಿಕ ಪ್ರವೃತ್ತಿಯ ಸಂರಕ್ಷಣೆಗಾಗಿ ನಡೆಯುವ ಮಹಾಮಸ್ತಕಾಭಿಷೇಕವು ಯುಗಳಮುನಿ ಪರಮಪೂಜ್ಯ ಶ್ರೀ ಅಮೋಘ ಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರ ಕೀರ್ತಿ ಮಹಾರಾಜ ಇವರ ಪಾವನ ಸಾನಿಧ್ಯದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮೂಡುಬಿದಿರೆ, ಶ್ರವಣಬೆಳಗೊಳ, ನರಸಿಂಹರಾಜಪುರ, ಲಕ್ಕವಳ್ಳಿ, ಹೊಂಬುಜ ಆರತೀಪುರ, ಸೋಂದ, ಅರಹಂತಗಿರಿ, ಕನಕಗಿರಿ ಕಂಬದಹಳ್ಳಿ, ಕಾರ್ಕಳ, ಶ್ರೀ ಕ್ಷೇತ್ರ ಗಾಂದಣಿ, ವರೂರು, ಕೊಲ್ಲಾಪುರ, ಜಿನಕಂಚಿ ಮೊದಲಾದ ಜೈನ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಡಿಕೆಶಿ ಅವರಿಂದ ಧಾರ್ಮಿಕ ಸಭೆ ಉದ್ಘಾಟನೆ: ಇಂದು ಬೆಳಿಗ್ಗೆ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ಮಧ್ಯಾಹ್ನ ಮುಖ ವಸ್ತ್ರ ಉದ್ಘಾಟನೆ, ನಾಂದಿ ಮಂಗಲ ವಿಧಾನ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ,ದಿಕ್ಪಾಲಕ ಬಲಿ ವಿಧಾನ, ಅಗ್ರೋದಕ ಮೆರವಣಿಗೆ ಇತ್ಯಾದಿ ಜರುಗಲಿದೆ. ಸಂಜೆ 3 ಗಂಟೆಯಿಂದ ನಡೆಯುವ ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ, ಸಂಸದ ನಳಿನ್ ಕುಮಾರ್ ಕಟೀಲ್ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಹರೀಶ್ ಕುಮಾರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್ ಮತ್ತಿತರರು ಭಾಗವಹಿಸಲಿದ್ದಾರೆ. ರಾತ್ರಿ 7.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ,ಯಕ್ಷಗಾನ ಜರಗಲಿದೆ.ಸಂಜೆ 6:45ರಿಂದ ಮಹಾಮಸ್ತಕಾಭಿಷೇಕ:ಫೆ. 22 ರಿಂದ ಮಾ.1ರ ತನಕ ಪ್ರತಿದಿನ ಸಂಜೆ ಗಂಟೆ 6:45 ರಿಂದ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಷ್ಟಗಂಧ ಮೊದಲಾದ ದ್ರವ್ಯಗಳ ಅಭಿಷೇಕದ ಬಳಿಕ ಪುಷ್ಪವೃಷ್ಠಿ ನಡೆಯಲಿದೆ.
ಪ್ರಥಮ ನಾಲ್ಕು ದಿನ108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ಸೇವಾಕರ್ತೃಗಳಿಂದ ನಡೆಯಲಿದ್ದು, 9ನೇ ದಿನ 1008 ಕಲಶಗಳೊಂದಿಗೆ ಸಮಿತಿ ವತಿಯಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ.ಪೂರ್ವಭಾವಿ ತಯಾರಿ: ಸರ್ಕಾರದ ವತಿಯಿಂದ ಮಹಾಮಸ್ತಕಾಭಿಷೇಕ ಬಗ್ಗೆ ರಸ್ತೆ ದುರಸ್ತಿ, ಆಕರ್ಷಕ ದೀಪಾಲಂಕಾರ, ಅಭಿವೃದ್ಧಿ ಕಾಮಗಾರಿ, ನವೀಕರಣ ಇತ್ಯಾದಿ ಬಹುತೇಕ ಪೂರ್ಣಗೊಂಡಿದೆ. ಸಮಿತಿ ವತಿಯಿಂದ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಅಗತ್ಯ ತಯಾರಿಗಳು ನಡೆಯುತ್ತಿವೆ. ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕಕ್ಕೆ ವೇಣೂರು ಸಂಪೂರ್ಣ ಸಿದ್ಧಗೊಂಡಿದೆ. ಕೊನೆಯ ಹಂತದ ಕೆಲವೊಂದು ಕೆಲಸಗಳು ಸಾಗುತ್ತಿವೆ.