ಕನ್ನಡಪ್ರಭ ವಾರ್ತೆ ಮಂಗಳೂರು/ಮೂಲ್ಕಿ
ಹಿರಿಯ ರಂಗಕರ್ಮಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ(93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಜು.17 ರಂದು ಮಂಗಳೂರು ಪುರಭವನದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಮೃತರ ಸಾರ್ವಜನಿಕ ಅಂತಿಮ ದರ್ಶನ ನಡೆಯಲಿದ್ದು, ಬಳಿಕ ಅವರ ಇಚ್ಛೆಯಂತೆ ದೇಹದಾನ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.ಕನ್ನಡ, ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವಿ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದ ಸದಾನಂದ ಸುವರ್ಣ, ಘಟಶ್ರಾದ್ಧ, ಕುಬಿ ಮತ್ತು ಇಯಾಲದಂತಹ ಸದಭಿರುಚಿಯ ಸಿನೆಮಾಗಳನ್ನು, ಗುಡ್ಡೆದ ಭೂತದಂತಹ ಧಾರಾವಾಹಿ, ಕೋರ್ಟ್ ಮಾರ್ಷಲ್ ನಾಟಕ, ಶಿವರಾಮ ಕಾರಂತರ ಕುರಿತು ಆಪ್ತ ನೋಟವನ್ನು ನೀಡುವ ಸಾಕ್ಷ್ಯಚಿತ್ರ, ಧಾರಾವಾಹಿಗಳನ್ನು ರಚಿಸಿದ್ದರು.
ಇವರ ನಿರ್ದೇಶನದ ಘಟಶ್ರಾದ್ಧ ಚಲನಚಿತ್ರಕ್ಕೆ 18 ಪ್ರಶಸ್ತಿಗಳು ಲಭಿಸಿತ್ತು. ಭಾರತದಲ್ಲಿ ಕಳೆದ ಶತಮಾನದಲ್ಲಿ ತಯಾರಾದ ಉತ್ಕೃಷ್ಟ 100 ಚಲನಚಿತ್ರಗಳಲ್ಲಿ ಒಂದಾದ ಹೆಗ್ಗಳಿಕೆಯನ್ನು ಪಡೆದಿದೆ. ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.ಮೂಲತಃ ದ.ಕ. ಜಿಲ್ಲೆಯ ಮೂಲ್ಕಿಯವರಾದ ಸದಾನಂದ ಸುವರ್ಣ, ಮುಂಬೈನಲ್ಲಿ ರಾತ್ರಿ ಹೈಸ್ಕೂಲ್‌ನಲ್ಲಿ ಅಧ್ಯಾಪಕರಾಗಿ ಐದು ವರ್ಷ ಕೆಲಸ ಮಾಡಿದ ಬಳಿಕ ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದರು.
ಮುಂಬೈಯಲ್ಲಿ ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದ ಅವರು, ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ಅವರು ಸಣ್ಣ ಕತೆ, ಕಾದಂಬರಿಗಳನ್ನು ಕೂಡ ಬರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ತಬರನ ಕತೆ, ಮನೆ, ಕ್ರೌರ್ಯ ಚಿತ್ರಗಳನ್ನು ನಿರ್ಮಿಸಿದ್ದರು. 1989ರಲ್ಲಿ ತೇಜಸ್ವಿ ಅವರ ಸಣ್ಣ ಕತೆ ಆಧಾರಿತ ಕುಬಿ ಹಾಗೂ ಇಯಾಲ ಸುವರ್ಣ ಅವರ ನಿರ್ದೇಶನದ ಮೊದಲ ಚಿತ್ರವಾಗಿದೆ. ಗುಡ್ಡದ ಭೂತ ಅವರ ನಿರ್ದೇಶನದ ಜನಪ್ರಿಯ ಕಿರುತೆರೆ ಧಾರವಾಹಿಯಾಗಿದ್ದು ಶಿವರಾಮ ಕಾರಂತ, ಶ್ರೀ ನಾರಾಯಣ ಗುರು, ತುಳುನಾಡು ಒಂದು ಇಣುಕುನೋಟ ಎಂಬ ಸಾಕ್ಷ್ಯಚಿತ್ರವನ್ನು ಸುವರ್ಣ ನಿರ್ದೇಶಿಸಿದ್ದರು.ತುಳು ಅಕಾಡೆಮಿ ಸಂತಾಪ:
ಹಿರಿಯ ರಂಗಕರ್ಮಿ, ಸಿನಿಮಾ ನಿರ್ಮಾಪಕ ಸದಾನಂದ ಸುವರ್ಣರ ನಿಧನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಂತಾಪ ಸೂಚಿಸಿದ್ದಾರೆ.ಗುಡ್ಡೆದ ಭೂತ ನಾಟಕ ಹಾಗೂ ಟೆಲಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಸದಾನಂದ ಸುವರ್ಣರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ 2001-2004ರ ಸಾಲಿನಲ್ಲಿ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದರು. ತುಳುನಾಡು ಓರ್ವ ಶ್ರೇಷ್ಠ ನಿರ್ದೇಶಕ, ನಿರ್ಮಾಪಕನನ್ನು ಕಳೆದುಕೊಂಡಿದೆ ಎಂದು ಅವರು ಸಂತಾಪ ಸಂದೇಶ ತಿಳಿಸಿದ್ದಾರೆ.