ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡದ ಹಿರಿಯ ಪೋಷಕ ನಟ ರಾಜು ತಾಳಿಕೋಟೆ ಯಾನೆ ರಾಜೇಸಾಬ್ ಮುಕ್ತಮ ಸಾಬ್ (59) ಸೋಮವಾರ ಇಲ್ಲಿನ ಹೆಬ್ರಿ ಎಂಬಲ್ಲಿ ಶೂಟಿಂಗ್ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ತಾಳಿಕೋಟೆಯ ನಿವಾಸಿಯಾಗಿದ್ದರು.ಅವರು ನಟ ಶೈನ್ ಶೆಟ್ಟಿ ಮುಖ್ಯಪಾತ್ರದಲ್ಲಿರುವ ‘ಶಂಕರಾಭರಣ’ ಸಿನಿಮಾದ ಚಿತ್ರೀಕರಣಕ್ಕೆ ಉಡುಪಿಗೆ ಬಂದಿದ್ದರು. ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣ ಅವರನ್ನು ಹೆಬ್ರಿ ಹೆಲ್ತ್ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ತೀರಾ ಗಂಭೀರ ಸ್ಥಿತಿಯಲ್ಲಿ ಅವರಿಗೆ ತುರ್ತಾಗಿ ಅಂಜಿಯೋ ಪ್ಲಾಸ್ಟಿ ನಡೆಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಅವರು ಕೊನೆಯುಸಿರೆಳೆದರು.
ಅವರ ಪಾರ್ಥಿವ ಶರೀರವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ. ಮಂಗಳವಾರ ಬೆಳಗ್ಗೆ 7ರಿಂದ 8 ಗಂಟೆವರೆಗೆ ಧಾರವಾಡ ರಂಗಾಯಣದ ಆವರಣದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಭಾನುವಾರ ರಾತ್ರಿ 6.30ರ ತನಕ ಜೊತೆಗೆ ಶೂಟಿಂಗ್ ನಡೆಸಿದ್ದೆವು. ಸೋಮವಾರವೂ ಶೂಟಿಂಗ್ ನಡೆಯಬೇಕಿತ್ತು. ಈ ನಡುವೆ ಅವರ ಅಗಲುವಿಕೆ ಆಗಿದೆ. ಶೂಟಿಂಗ್ ನಡುವೆ ಬಿಡುವಿದ್ದಾಗ ಒಗಟುಗಳನ್ನು ಬಿಡಿಸುವ ಸವಾಲೊಡ್ಡಿ ಸದಾ ಸಕ್ರಿಯರಾಗಿರುತ್ತಿದ್ದರು. ಅವರಿನ್ನು ಇಲ್ಲವೆಂದರೆ ನಂಬಲೇ ಆಗುತ್ತಿಲ್ಲ ಎಂದು ಈ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಮಂಜುಳಾ ಜನಾರ್ದನ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ರಾಜು ತಾಳಿಕೋಟಿಯವರು ಉತ್ತರ ಕರ್ನಾಟಕದ ಶೈಲಿಯ ಭಾಷೆ ಮತ್ತು ಉಡುಗೆ-ತೊಡುಗೆಯೊಂದಿಗೆ ಹಾಸ್ಯ ಮತ್ತು ಬೋಧಪ್ರದ ಪಾತ್ರಗಳನ್ನು ಮಾಡುತ್ತಿದ್ದರಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅದರಲ್ಲೂ ವಿಶೇಷವಾಗಿ, ಕುಡುಕನ ಪಾತ್ರಗಳಲ್ಲಿ ಅವರ ಅಭಿನಯ ಅತ್ಯಂತ ಲೀಲಾಜಾಲವಾಗಿರುತ್ತಿತ್ತು. ''''''''ಕಲಿಯುಗದ ಕುಡುಕ'''''''', ''''''''ಕುಡುಕರ ಸಾಮ್ರಾಜ್ಯ'''''''', ಮತ್ತು ''''''''ಅಸಲಿ ಕುಡುಕ'''''''' ಅವರ ಪ್ರಖ್ಯಾತ ನಾಟಕಗಳಾಗಿದ್ದು, ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮನೆಮಾತಾಗಿದ್ದವು.
ಉತ್ತರ ಕರ್ನಾಟಕದ ಗಡಸು ಧ್ವನಿ, ಭಾಷೆ ಮೂಲಕ ಚಿರಪರಿಚಿತರಾಗಿದ್ದ ರಾಜು ತಾಳಿಕೋಟಿ, 2024ರ ಆ.16ರಂದು ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರಲ್ಲಿ ರಂಗಾಯಣವನ್ನು ಉನ್ನತ ಮಟ್ಟದಲ್ಲಿ ಕಾಣುವ ಅಭಿಲಾಸೆ ಇತ್ತು. ಆದರೆ, ಅಷ್ಟರೊಳಗಾಗಿ ಅವರ ಬಣ್ಣದ ಬದುಕು ಮುಗಿದಿದೆ.