‘ಪ್ರಚಂಡ ಕುಳ್ಳ’ ದ್ವಾರಕೀಶ್‌ ಇನ್ನಿಲ್ಲ

KannadaprabhaNewsNetwork | Published : Apr 17, 2024 2:01 AM

ಸಾರಾಂಶ

‘ಪ್ರಚಂಡ ಕುಳ್ಳ’ ಎಂದೇ ಖ್ಯಾತರಾಗಿದ್ದ ಕನ್ನಡ ಚಲನಚಿತ್ರ ರಂಗದ ಹಿರಿಯ ಕಲಾವಿದ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ (81) ಅವರು ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಪ್ರಚಂಡ ಕುಳ್ಳ’ ಎಂದೇ ಖ್ಯಾತರಾಗಿದ್ದ ಕನ್ನಡ ಚಲನಚಿತ್ರ ರಂಗದ ಹಿರಿಯ ಕಲಾವಿದ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ (81) ಅವರು ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ದ್ವಾರಕೀಶ್‌ ಅವರು ಪತ್ನಿ ಶೈಲಜಾ ಮತ್ತು ಪುತ್ರರಾದ ಯೋಗೀಶ್‌, ಸಂತೋಷ್‌, ಗಿರೀಶ್‌, ಸುಕೇಶ್‌, ಅಭಿಲಾಷ್ ಸೇರಿದಂತೆ ಆರು ಪುತ್ರರು, ಸೊಸೆಯಂದಿರು, ಮೊಮ್ಕಕ್ಕಳು, ಬಂಧು ಮಿತ್ರರು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

ತಂದೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಹೊಟ್ಟೆ ನೋವು ಕಾಣಿಸಿಕೊಂಡು ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ಮಂಗಳವಾರ ಬೆಳಗ್ಗೆ ಹಾಸಿಗೆಯಿಂದ ಎದ್ದು ಕಾಫಿ ಕುಡಿದರು. ಎರಡು ತಾಸು ನಿದ್ದೆ ಮಾಡುತ್ತೇನೆ, ಆಮೇಲೆ ಎಬ್ಬಿಸು ಎಂದು ಹೇಳಿ ಮಲಗಿದ್ದವರು ಮತ್ತೆ ಮೇಲೇಳಲಿಲ್ಲ. ಅವರಿಗೆ ಮಲಗಿರುವಾಗಲೇ ಹೃದಯಾಘಾತವಾಗಿದೆ. ಕೂಡಲೇ ನಾಡಿಮಿಡಿತ ಪರೀಕ್ಷಿಸಿದೆವು. ಅದಾಗಲೇ ದೇಹ ತಣ್ಣಗಾಗಿತ್ತು. ಕೂಡಲೇ ವೈದ್ಯರನ್ನು ಸಂಪರ್ಕಿಸಿದೆವು. ವೈದ್ಯರು ಬಂದು ಸಿಪಿಆರ್‌ ಕೊಟ್ಟು ಬದುಕಿಸಲು ಪ್ರಯತ್ನಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದ್ವಾರಕೀಶ್‌ ಅವರ ಪುತ್ರ ಯೋಗೀಶ್‌ ಮಾಹಿತಿ ನೀಡಿದರು.

ಪತ್ನಿಯೂ ಏಪ್ರಿಲ್‌ 16ರಂದೇ ನಿಧನ:

ದ್ವಾರಕೀಶ್‌ ಅವರ ಮೊದಲ ಪತ್ನಿ ಅಂಬುಜಾ ಅವರು 2021 ಏಪ್ರಿಲ್‌ 16ರಂದು ನಿಧನರಾಗಿದ್ದರು. ಇದೀಗ ಅವರ ಪತ್ನಿ ನಿಧನರಾದ ದಿನದಂದೇ (ಏಪ್ರಿಲ್‌ 16) ಇಹಲೋಕ ತ್ಯಜಿಸಿದ್ದಾರೆ.

ಅಂತಿಮ ನಮನ:

ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸ್ವಗೃಹದಲ್ಲಿ ದ್ವಾರಕೀಶ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಹಲವು ಮಂದಿ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.

ಹಿರಿಯ ಕಲಾವಿದರಾದ ಶ್ರೀನಾಥ್‌, ಶ್ರೀನಿವಾಸಮೂರ್ತಿ, ರಮೇಶ್‌ ಅರವಿಂದ್‌, ರಮೇಶ್‌ ಭಟ್‌, ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್‌.ಸುರೇಶ್‌, ಸಂಗೀತ ನಿರ್ದೇಶಕ ಗುರುಕಿರಣ್‌, ವಿನೋದ್‌ ರಾಜ್‌, ನಿರ್ದೇಶಕ ಟಿ.ಎಸ್‌.ನಾಗಾಭರಣ, ನೀನಾಸಂ ಸತೀಶ್‌, ಸುಂದರ್‌ರಾಜ್‌, ಮೇಘನಾರಾಜ್‌ ಸರ್ಜಾ, ನಟಿ ಭವ್ಯಾ, ಫಿಲ್ಮ್‌ ಛೇಂಬರ್ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಅಶ್ವತ್‌ ನೀನಾಸಂ ಸೇರಿದಂತೆ ಹಲವು ಮಂದಿ ಹಿರಿ-ಕಿರಿ ತೆರೆಯ ಕಲಾವಿದರು, ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಕೈನೋವಿನ ನಡುವೆಯೂ ನಟ ದರ್ಶನ್‌ ಅವರು ದ್ವಾರಕೀಶ್‌ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗಣ್ಯರ ಸಂತಾಪ:

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಹಿರಿಯ ಕಲಾವಿದ ಶಿವರಾಜಕುಮಾರ್‌, ಸುದೀಪ್‌, ಬಹುಭಾಷಾ ನಟ ರಜನಿಕಾಂತ್‌ ಸೇರಿದಂತೆ ನಾಡಿನ ಹಲವು ಗಣ್ಯರು ‘ಎಕ್ಸ್’ ಮೂಲಕ ದ್ವಾರಕೀಶ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ:ದ್ವಾರಕೀಶ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 11:30ಕ್ಕೆ ಚಾಮರಾಜಪೇಟೆಯ ಟಿಆರ್​​ ಮೀಲ್​ನಲ್ಲಿ ನಡೆಯಲಿದೆ.

ಬುಧವಾರ ಮುಂಜಾನೆ 7.30ರವರೆಗೂ ದ್ವಾರಕೀಶ್‌ ಅವರ ಸ್ವಗೃಹದಲ್ಲಿಯೇ ಪಾರ್ಥಿವ ಶರೀರವು ಇರಲಿದ್ದು, ಗಣ್ಯರು ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಬೆಳಿಗ್ಗೆ 7.30 ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆಯ ನಂತರ ಚಾಮರಾಜಪೇಟೆಯ ಟಿಆರ್ ಮಿಲ್​​ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ಮೆರವಣಿಗೆಯೊಂದಿಗೆ ತೆಗೆದುಕೊಂಡು ಹೋಗಲಾಗುವುದು. ಅಲ್ಲಿಯೇ ಧಾರ್ಮಿಕ ವಿಧಿವಿಧಾನಗಳ ಜೊತೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ಚಲನಚಿತ್ರ ಚಟುವಟಿಕೆ ಸ್ಥಗಿತ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯರಾದ ದ್ವಾರಕೀಶ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ದ್ವಾರಕೀಶ್‌ ಅವರ ಗೌರವಾರ್ಥ ಬುಧವಾರ ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲಿ ಚಲನಚಿತ್ರ ಶೂಟಿಂಗ್‌ ಸ್ಥಗಿತಗೊಳಿಸಲಾಗುವುದು. ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಬೆಳಗಿನ ಚಲನಚಿತ್ರ ಪ್ರದರ್ಶನ ರದ್ದುಗೊಳಿಸಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್‌ ತಿಳಿಸಿದ್ದಾರೆ.

Share this article