ಮುಂಡರಗಿ : ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಶಾಸಕರಾಗಿ, ನೀರಾವರಿ ಹಾಗೂ ಗೃಹ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅಪಾರವಾದ ಅನುಭವ ಹೊಂದಿರುವ ದಕ್ಷ ರಾಜಕಾರಣಿ ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲವು ಸಾಧಿಸುವುದು ನಿಶ್ಚಿತ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು.
ಸೋಮವಾರ ಸಂಜೆ ಮುಂಡರಗಿಯಲ್ಲಿ ಸುದ್ದಿಗೋಷ್ಠಿ ಅವರು ಮಾತನಾಡಿದರು.
ಅವರ ದಕ್ಷತೆ, ಉತ್ತಮ ಆಡಳಿತದ ಜಾಣ್ಮೆ ಅವರ ಆಯ್ಕೆಗೆ ಧನಾತ್ಮಕ ಅಂಶವಾಗಿದೆ. ಇದು ಭಾರತದ ಚುನಾವಣೆಯಾಗಿದ್ದು, ಬೊಮ್ಮಾಯಿಯವರಿಗೆ ಇರುವ ಅನುಭದಿಂದಾಗಿ ಲೋಕಸಭೆಯಲ್ಲಿ ರಾಷ್ಟ್ರೀಯ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಈ ಪ್ರದೇಶ, ಈ ಕ್ಷೇತ್ರ, ಈ ರಾಜ್ಯ, ರಾಷ್ಟ್ರದ ನೀತಿಗಳನ್ನು ರೂಪಿಸುವಲ್ಲಿ ಅವರದೇ ಆದ ಕೊಡುಗೆಯನ್ನು ಕೊಡುತ್ತಾರೆ ಎನ್ನುವ ವಿಶ್ವಾಸ ನಮ್ಮೆಲ್ಲರಿಗೂ ಇದೆ. ಈ ಬಾರಿ ಚುನಾವಣೆಯಲ್ಲಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಹಾವೇರಿ-ಗದಗ ಮತದಾರರು ಆರಿಸಿ ಕಳಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಈ ದೇಶಕ್ಕೆ ಅಭಿವೃದ್ದಿ ಪರವಾದ ದೂರದೃಷ್ಟಿಯುಳ್ಳ ಮೋದಿಯವರೇ ದೊಡ್ಡ ಗ್ಯಾರಂಟಿ. ಕೇವಲ ಹಾವೇರಿ-ಗದಗ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ದೇಶಾದ್ಯಂತ 500ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ 240ಕ್ಕೆ ಬಂದು ನಿಂತಿದೆ. ಅವರಿಗೆ ಅವರ ಮೇಲೆ ನಂಬಿಕೆ ಹೊರಟು ಹೋದಂತಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ, ಶಿವಕುಮಾರಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ, ಕೊಟ್ರೇಶ ಅಂಗಡಿ, ಆನಂದಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ವಿ. ಸೀತಾರಾಮರಾಜು, ಎಸ್.ವಿ. ಪಾಟೀಲ, ಗೌತಮಚಂದ್ ಚೋಪ್ರಾ, ಸೀತಾರಾಮರಾಜು, ವೀರಣ್ಣ ತುಪ್ಪದ, ಆರ್.ಎಂ. ತಪ್ಪಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.