ಹಿರಿಯ ಯಕ್ಷಗಾನ ಕಲಾವಿದ ಪೆರುವಡಿ ನಾರಾಯಣ ಭಟ್ ನಿಧನ

KannadaprabhaNewsNetwork |  
Published : Nov 01, 2023, 01:00 AM IST
ಫೋಟೋ: ೩೧ಪಿಟಿಆರ್-ನಾರಾಯಣ ಭಟ್ | Kannada Prabha

ಸಾರಾಂಶ

ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದಿದ್ದ ನಾರಾಯಣ ಭಟ್ ಅವರು ಯಕ್ಷಗಾನ ಹಾಸ್ಯ ಪಾತ್ರದಲ್ಲಿ ಮನೆ ಮಾತಾಗಿದ್ದರು. ತನ್ನ ೧೪ನೇ ವಯಸ್ಸಿನಲ್ಲಿಯೇ ಯಕ್ಷರಂಗ ಪ್ರವೇಶ ಮಾಡಿದ್ದ ಅವರು ಮೊದಲಿಗೆ ಧರ್ಮಸ್ಥಳ ಮೇಳದಲ್ಲಿ ಸೇವೆ ಆರಂಭಿಸಿದ್ದ ಅವರು ಬಳಿಕ ತನ್ನ ಸ್ವಂತ `ಮೂಲ್ಕಿ ಮೇಳ'' ಕಟ್ಟಿಕೊಂಡು ಸುಮಾರು ೧೩ ವರ್ಷ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಕನ್ನಡಪ್ರಭವಾರ್ತೆ ಪುತ್ತೂರು ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬಪ್ಪಳಿಗೆ ತೆಂಕಿಲ ನೂಜಿ ನಿವಾಸಿ ಪೆರುವಡಿ ನಾರಾಯಣ ಭಟ್ (98) ವಯೋಸಹಜ ಅಸೌಖ್ಯದಿಂದ ಮಂಗಳವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದಿದ್ದ ನಾರಾಯಣ ಭಟ್ ಅವರು ಯಕ್ಷಗಾನ ಹಾಸ್ಯ ಪಾತ್ರದಲ್ಲಿ ಮನೆ ಮಾತಾಗಿದ್ದರು. ತನ್ನ ೧೪ನೇ ವಯಸ್ಸಿನಲ್ಲಿಯೇ ಯಕ್ಷರಂಗ ಪ್ರವೇಶ ಮಾಡಿದ್ದ ಅವರು ಮೊದಲಿಗೆ ಧರ್ಮಸ್ಥಳ ಮೇಳದಲ್ಲಿ ಸೇವೆ ಆರಂಭಿಸಿದ್ದ ಅವರು ಬಳಿಕ ತನ್ನ ಸ್ವಂತ `ಮೂಲ್ಕಿ ಮೇಳ'''' ಕಟ್ಟಿಕೊಂಡು ಸುಮಾರು ೧೩ ವರ್ಷ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಬಳಿಕ ಸುರತ್ಕಲ್ ಮೇಳದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ ಮತ್ತು ಮಾನ್ಯತೆ ತಂದು ಕೊಟ್ಟಿರುವ ಹಾಸ್ಯ ಕಲಾವಿದರಾದ ಅವರು ‘ಪಾಪಣ್ಣ ವಿಜಯ’ ಪ್ರಸಂಗದಲ್ಲಿ ‘ಪಾಪಣ್ಣ’ ಪಾತ್ರದ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಮನ್ನಣೆ ಗಳಿಸಿದ್ದರು. `ದಮಯಂತಿ ಪುನರ್‌ಸ್ವಯಂವರ’ ಪ್ರಸಂಗದಲ್ಲಿ ‘ಬಾಹುಕ’ ಪಾತ್ರ ನಿರ್ವಹಿಸಿ ಪಾತ್ರಕ್ಕೆ ಹೊಸ ರೂಪ ನೀಡಿದ್ದರು. ಪೌರಾಣಿಕ ಪ್ರಸಂಗಗಳಲ್ಲಿ ಬಹುತೇಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದ ಅವರು ತುಳು ಪ್ರಸಂಗಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದ ಕಲಾವಿದ. ಪದ್ಯಾಣ ಕುಟುಂಬದ ನಾರಾಯಣ ಭಟ್ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಪೆರುವಡಿಯಲ್ಲಿನ ಅಜ್ಜನ ಮನೆಯಲ್ಲಿ ಬೆಳೆದಿದ್ದರು. ಅಲ್ಲಿಯೇ ಯಕ್ಷರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಅದರಿಂದಾಗಿ ಅವರು ಪೆರುವಡಿ ನಾರಾಯಣ ಭಟ್ ಎಂದೇ ಪ್ರಸಿದ್ದರಾಗಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ ಚಿಕ್ಕಪುತ್ತೂರಿನ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ