ಕೊಪ್ಪಳ ಜಿಲ್ಲೆಯಲ್ಲಿ ₹12 ಕೋಟಿ ಬಾಕಿ । ಕೆಲಸ ಮಾಡಿ, ಕೂಲಿಗಾಗಿ ಪರಿತಪಿಸುತ್ತಿರುವ ಕಾರ್ಮಿಕರು ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ ಭೀಕರ ಬರದಿಂದ ರೈತ ಸಮುದಾಯ ತತ್ತರಿಸುತ್ತಿರುವುದು ಒಂದಡೆಯಾದರೆ, ದುಡಿದಿರುವ ಕೂಲಿಯೂ ಬಾರದಿರುವುದು ಕಾರ್ಮಿಕರನ್ನು ಕಂಗಾಲಾಗಿಸಿದೆ.ಹೌದು, ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೆ.1 ರಿಂದ ಇಲ್ಲಿಯವರೆಗೂ ಸುಮಾರು ₹ 12 ಕೋಟಿ ಬಾಕಿ ಇದ್ದು. ಇದರಲ್ಲಿ ₹ 6 ಕೋಟಿ ಕಾರ್ಮಿಕರ ಕೂಲಿ ಇರುವುದು ಗಮನಾರ್ಹ ಸಂಗತಿ.ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿರುವ ಕಾರ್ಮಿಕರು ಈಗ ಬಾರದಿರುವ ಕೂಲಿ ಹಣಕ್ಕಾಗಿ ಅಧಿಕಾರಿಗಳ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಾರೆ.ಎನ್ಆರ್ ಇಜಿ ನಿಯಮಾನುಸಾರ ವಾರಕ್ಕೂ ಅಧಿಕ ದಿನ ಕೂಲಿ ಹಣ ಬಾಕಿ ಇಟ್ಟುಕೊಳ್ಳುವಂತೆ ಇಲ್ಲ. ಆದರೆ, ಈಗ ಎರಡು ತಿಂಗಳಿಂದ ಕೂಲಿ ಪಾವತಿಯಾಗದಿದ್ದರೆ ಕಾರ್ಮಿಕರು ಜೀವನ ನಡೆಸುವುದಾದರೂ ಹೇಗೆ? ಆಯಾ ದಿನದ ಕೂಲಿಯನ್ನು ಅಂದೇ ನೀಡಿದರೂ ಅವರ ಬದುಕು ಅಷ್ಟಕಷ್ಟೇ ಇರುತ್ತದೆ. ಹೀಗಿದ್ದಾಗ ಎರಡು ತಿಂಗಳಿಂದ ಕೂಲಿ ಬಾರದಿದ್ದರೆ ಅವರು ಜೀವನ ನಡೆಸಲು ಮತ್ತೊಂದು ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಅನುದಾನ ಬಂದಿಲ್ಲ :
ನರೇಗಾ ಅನುದಾನ ಬಾರದಿರುವುದು ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತದೆ. ಆದರೆ, ರಾಜ್ಯ ಸರ್ಕಾರ ಬಳಕೆ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗಿದ್ದರಿಂದ ಅನುದಾನ ಬಂದಿಲ್ಲ. ಏನು ಆಗಿದೆಯೋ ಗೊತ್ತಿಲ್ಲ. ಆದರೆ, ಕಾರ್ಮಿಕರು ಮತ್ತು ನರೇಗಾದಲ್ಲಿ ಮಾಡಿದ ಗುತ್ತಿಗೆದಾರರ ಅನುದಾನವಂತೂ ಬಂದಿಲ್ಲ ಎನ್ನುವುದು ಮಾತ್ರ ದಿಟ.ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಬಾಕಿ ಇಲ್ಲ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸೇರಿ ನೂರಾರು ಕೋಟಿ ಬಾಕಿ ಇದೆ. ಕೊಪ್ಪಳ ಜಿಲ್ಲೆಯಲ್ಲಿ ₹12 ಕೋಟಿ ಎಂದರೆ ಇತರೇ ಜಿಲ್ಲೆ ಸೇರಿ ₹ 500 ಕೋಟಿಗೂ ಅಧಿಕ ಬಾಕಿ ಇದೆ.ಕೂಲಿ ಕೆಲಸವೂ ಇಲ್ಲ
ಕೂಲಿ ಬಾಕಿ ಇರುವುದು ಒಂದು ಕಡೆಯಾದರೇ ಈಗ ನರೇಗಾದಲ್ಲಿ ಅಷ್ಟಾಗಿ ಕೆಲಸ ನೀಡುತ್ತಿಲ್ಲ. ನೀಡಿದರೂ ಕಾರ್ಮಿಕರು ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಕೂಲಿಯೇ ಬಾರದಿದ್ದರೆ ಹೇಗೆ ಕೆಲಸ ಮಾಡುವುದು ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿಯೇ ಭೀಕರ ಬರ ಎದುರಾಗಿದೆ. ಮುಂಗಾರು ಮತ್ತು ಹಿಂಗಾರು ಸಂಪೂರ್ಣ ವೈಫಲ್ಯವಾಗಿರುವುದರಿಂದ ರೈತರ ಮತ್ತು ರೈತ ಕಾರ್ಮಿಕರ ಬದುಕು ಅಸಹನೀಯವಾಗಿದೆ. ಹೀಗಾಗಿ, ನರೇಗಾ ಯೋಜನೆಯಲ್ಲಿ ನೀಡುವ ಕೂಲಿ ದಿನ ಹೆಚ್ಚಿಸಬೇಕು ಮತ್ತು ಬರ ನಿವಾರಣೆಯಾಗುವವರೆಗೂ ನಿರಂತರವಾಗಿ ಕೆಲಸ ನೀಡಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹವಾಗಿದೆ.ಉದ್ಯೋಗ ಖಾತ್ರಿ ಕೂಲಿ ಸೇರಿದಂತೆ ಬರಬೇಕಾಗಿರುವ ಅನುದಾನ ಬಂದಿಲ್ಲ. ಇಷ್ಟರಲ್ಲಿಯೇ ಬರುವ ಸಾಧ್ಯತೆ ಇದೆ. ಬರ ಇರುವುದರಿಂದ ಹೆಚ್ಚು ಹೆಚ್ಚು ಮಾನವ ದಿನ ಸೃಜಿಸಿ ಕೆಲಸ ನೀಡಲಾಗುತ್ತಿದೆ.ರಾಹುಲ ರತ್ಮಂ ಪಾಂಡೆ, ಸಿಇಓ ಜಿಪಂ ಕೊಪ್ಪಳ
ಬರ ಇರುವುದರಿಂದ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ರೈತಾಪಿಯಾಗಿಯೂ ಕೆಲಸ ಇಲ್ಲದಂತಾಗಿದೆ. ಈಗ ಆಸರೆಯಾಗಿರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಯೂ ಬಾರದಿರುವುದರಿಂದ ಇನ್ನು ಸಮಸ್ಯೆಯಾಗಿದೆ.ಸುಂಕಪ್ಪ ಗದಗ, ಕಾರ್ಮಿಕರ ಹೋರಾಟಗಾರ