ಕನ್ನಡಪ್ರಭ ವಾರ್ತೆ ಇಳಕಲ್ಲ ಇಂದು ಗ್ರಾಮೀಣ ಜನರು ಅನುಭವಿಸುವಷ್ಟು ತೊಂದರೆಗಳನ್ನು ನಗರ ಪ್ರದೇಶದವರು ಅನುಭವಿಸುವುದಿಲ್ಲ. ಆದ್ದರಿಂದ ಗ್ರಾಮೀಣ ಜನರ ಸಮಸ್ಯೆ ಅರಿತ ನಮ್ಮ ಸರ್ಕಾರ ಗ್ರಾಮೀಣ ಜನರ ಸೇವೆಗೆ ಮುಂದಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು. ಇಳಕಲ್ಲ ತಾಲೂಕಿನ ಹಿರೇಕೊಡಗಲಿ ಗ್ರಾಮದಲ್ಲಿ ಸರ್ಕಾರದ ನೂತನ ಪಶು ಚಕಿತ್ಸಾಲಯ ಉದ್ಘಾಟಿಸಿ ಮಾತನಾಡಿ, ದನ-ಕರುಗಳ ಆರೋಗ್ಯ ಏರುಪೇರಾದರೆ ನಗರ ಪ್ರದೇಶಕ್ಕೆ ತರುವ ತೊಂದರೆ ತಪ್ಪಿಸುವ ಸಲುವಾಗಿ ಸರ್ಕಾರ ಪ್ರತಿ ಗ್ರಾಮ ಪಂಚಾಯತಿಗೊಂದು ಪಶು ಚಕಿತ್ಸಾಲಯ ಮಾಡಲು ನಿರ್ಧರಿಸಿದೆ. ಇಳಕಲ್ಲ ತಾಲೂಕಿನ ಹಿರೇಕೊಡಗಲಿ ಗ್ರಾಮದಲ್ಲಿ ಈ ಪಶು ಚಕಿತ್ಸಾಲಯ ಉದ್ಘಾಟಿಸಲಾಗಿದೆ. ಹಿರೇಕೊಡಗಲಿ ಗ್ರಾಪಂ ವ್ಯಾಪ್ತಿಯ ಎಲ್ಲ ಒಂಭತ್ತು ಗ್ರಾಮಸ್ಥರು ಇಳಕಲ್ಲ ನಗರಕ್ಕೆ ಜಾನುವಾರು ಹೊಡೆದುಕೊಂಡು ಹೋಗದೆ ಇದೇ ಪಶುಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ ಎಂದರು. ಬಾಗಲಕೋಟೆ ಜಿಲ್ಲಾ ಪಶು ಇಲಾಖೆಯ ಹಿರಿಯ ಅಧಿಕಾರಿಗಳು, ಇಳಕಲ್ಲ ತಾಲೂಕು ಪಶು ಇಲಾಖೆ ವೈದ್ಯರು, ಹಿರೇಕೊಡಗಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.