ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿ: ಡಾ. ಹರೀಶ್ ಸಲಹೆ

KannadaprabhaNewsNetwork |  
Published : Apr 03, 2024, 01:31 AM IST
52 | Kannada Prabha

ಸಾರಾಂಶ

ರಾಸುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗ. ಹಸು, ಎಮ್ಮೆ, ಪ್ರಾಣಿಗಳಲ್ಲಿ ವೈರಾಣುಗಳಿಂದ ಈ ರೋಗ ಕಾಣಿಸಿಕೊಳ್ಳುತ್ತಿದೆ. ರೋಗವು ಅತಿ ಬೇಗನೆ ರೋಗಗ್ರಸ್ತ ರಾಸುವಿನಿಂದ ಇನ್ನೊಂದು ರಾಸುವಿಗೆ ನೇರ ಸಂಪರ್ಕ, ಗಾಳಿ, ನೀರು, ಆಹಾರದ ಮೂಲಕ ಹರಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯಿಲ್ಲ ಹೀಗಾಗಿ ಲಸಿಕೆ ಹಾಕಿಸುವ ಮೂಲಕ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು

ಕನ್ನಡಪ್ರಭ ವಾರ್ತೆ ಭೇರ್ಯ

ಕಾಲುಬಾಯಿ ಜ್ವರಕ್ಕೆ ತುತ್ತಾದ ರಾಸುಗಳಲ್ಲಿ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತದೆ. ಗರ್ಭಧಾರಣೆ ಅವಕಾಶವೂ ಕಡಿಮೆಯಾಗಿ ಬಂಜೆತನ ಉಂಟಾಗುತ್ತದೆ ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತಪ್ಪದೇ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿ ಎಂದು ಭೇರ್ಯ ಪಶುವೈದ್ಯ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ಹರೀಶ್ ಹೇಳಿದರು.

ಸಮೀಪದ ಹರಂಬಳ್ಳಿ ಕೊಪ್ಪಲು ಗ್ರಾಮದಲ್ಲಿ ಪಶುವೈದ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 5ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ತಿಂಗಳ ಕಾಲ ನಡೆಯುವ ಕಾಲುಬಾಯಿ ಜ್ವರ ವಿರುದ್ಧದ ಲಸಿಕಾ ಕಾರ್ಯಕ್ರಮದಲ್ಲಿ ನಾನು ಸೇರಿದಂತೆ ನಮ್ಮ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಹೋಗಿ ರಾಸುಗಳಿಗೆ ಲಸಿಕೆ ಹಾಕುತ್ತಿದ್ಸೇವೆ. ಹೀಗಾಗಿ ಎಲ್ಲ ರೈತರು ತಪ್ಪದೇ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಕಾಲುಬಾಯಿ ಜ್ವರದ ಬಗ್ಗೆ ಒಂದಿಷ್ಟು ಮಾಹಿತಿ

ರಾಸುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗ. ಹಸು, ಎಮ್ಮೆ, ಪ್ರಾಣಿಗಳಲ್ಲಿ ವೈರಾಣುಗಳಿಂದ ಈ ರೋಗ ಕಾಣಿಸಿಕೊಳ್ಳುತ್ತಿದೆ. ರೋಗವು ಅತಿ ಬೇಗನೆ ರೋಗಗ್ರಸ್ತ ರಾಸುವಿನಿಂದ ಇನ್ನೊಂದು ರಾಸುವಿಗೆ ನೇರ ಸಂಪರ್ಕ, ಗಾಳಿ, ನೀರು, ಆಹಾರದ ಮೂಲಕ ಹರಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯಿಲ್ಲ ಹೀಗಾಗಿ ಲಸಿಕೆ ಹಾಕಿಸುವ ಮೂಲಕ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ರೋಗ ಲಕ್ಷಣಗಳಿವು- ರೋಗಗ್ರಸ್ತ ರಾಸುಗಳಲ್ಲಿ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಚಿಕ್ಕಚಿಕ್ಕ ನೀರುಗುಳ್ಳೆಗಳಾಗಿ ಕ್ರಮೇಣ ಈ ಗುಳ್ಳೆಗಳು ಒಡೆದು ಜೊಲ್ಲು ಸುರಿಯುತ್ತದೆ. ಅದರ ನೋವಿನಿಂದ ರಾಸುಗಳು ಮೇವು ತಿನ್ನುವುದನ್ನು ಬಿಡುತ್ತವೆ. ಒಮ್ಮೊಮ್ಮೆ ನಾಲಿಗೆಯ ಮೇಲೆ ಹುಣ್ಣು ಹೆಚ್ಚಾಗಿ ಅದರ ಮೇಲ್ಪದರವೇ ಕಿತ್ತು ಬರುತ್ತದೆ. ಇದರಿಂದ ಆಹಾರ ಸೇವಿಸದ ರಾಸುವಿನ ಆರೋಗ್ಯ ಕ್ಷೀಣಿಸುತ್ತದೆ. ಕಾಲಿನ ಗೊರಸಿನ ಮಧ್ಯದಲ್ಲೂ ಹುಣ್ಣುಗಳಾಗಿ ರಾಸುಗಳು ಕುಂಟಲು ಪ್ರಾರಂಭಿಸುತ್ತವೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಲಸಿಕಾ ಅಭಿಯಾನದಲ್ಲಿ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ರೈತರಿಗೆ ಹಾಗೂ ಜಾನುವಾರುಗಳ ಮಾಲೀಕರಿಗೆ ಮನವಿ ಮಾಡಿದರು.

ಪಶುವೈದ್ಯ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಬರುವ ಭೇರ್ಯ, ಬಟಿಗನಹಳ್ಳಿ, ಸಂಬ್ರವಳ್ಳಿ, ಸೋಮನಹಳ್ಳಿ ಕಾಲೋನಿ, ಸುಗ್ಗನಹಳ್ಳಿ, ಮಂಡಿಗನಹಳ್ಳಿ, ಹರಂಬಳ್ಳಿ, ಹರಂಬಳ್ಳಿಕೊಪ್ಪಲು, ಗುಳುವಿನ ಅತ್ತಿಗುಪ್ಪೆ, ಅರಕೆರೆ, ಉದಯಗಿರಿ, ಕಾವಲ್ ಹೊಸೂರು,‌ ಚಿಕ್ಕಭೇರ್ಯ, ಗೇರದಡ, ಬಸವನಪುರ ಗ್ರಾಮಗಳಲ್ಲಿರುವ 3,500 ದನಗಳು, 600 ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಪಶು ಪರೀಕ್ಷಕರು ಆನಂದ್, ಪೃಥ್ವಿ, ಸಿಬ್ಬಂದಿ ಸಂತೋಷ್, ರಾಜಶೇಖರ್, ಪಶುಸಖಿ ಲಕ್ಷ್ಮೀ, ಡೇರಿ ಕಾರ್ಯದರ್ಶಿ ಪವಿತ್ರ, ಮುಖಂಡರಾದ ಜವರೇಗೌಡ, ಅನಿಲ್ ಕುಮಾರ್, ಸುರೇಶ್ ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?