ಸೂರನಹಳ್ಳಿ ರೈತರ 30 ವರ್ಷಗಳ ಹೋರಾಟಕ್ಕೆ ಜಯ

KannadaprabhaNewsNetwork |  
Published : Nov 28, 2026, 12:30 AM IST
27ಎಚ್ಎಸ್ಎನ್4 :  | Kannada Prabha

ಸಾರಾಂಶ

ಹೊಳೆನರಸೀಪುರ ತಾಲ್ಲೂಕಿನ ಸೂರನಹಳ್ಳಿ ಗ್ರಾಮದ ಸರ್ವೆ ನಂ.180 ಸೇರಿದಂತೆ ವಿವಿಧ ಸರ್ವೆ ನಂಬರ್‌ಗಳಲ್ಲಿರುವ 88 ರೈತರ ನೀರಾವರಿ ಕೃಷಿ ಜಮೀನು ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 30 ವರ್ಷಗಳ ಕಾನೂನು ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ ಎಂದು ವಕೀಲ ಮೋಹನ್ ಕುಮಾರ್ ತಿಳಿಸಿದರು. ಸುದೀರ್ಘ ವಿಚಾರಣೆಯ ಬಳಿಕ ೨೦೨೬ರ ಸೆಪ್ಟೆಂಬರ್ ೨೧ರಂದು ಉಚ್ಚ ನ್ಯಾಯಾಲಯವು ಸರ್ಕಾರ ಹಾಗೂ ಪುರಸಭೆಯ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಇದರಿಂದ ಮೂರು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ರೈತರಿಗೆ ನ್ಯಾಯ ದೊರೆತಂತಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಹೊಳೆನರಸೀಪುರ ತಾಲ್ಲೂಕಿನ ಸೂರನಹಳ್ಳಿ ಗ್ರಾಮದ ಸರ್ವೆ ನಂ.180 ಸೇರಿದಂತೆ ವಿವಿಧ ಸರ್ವೆ ನಂಬರ್‌ಗಳಲ್ಲಿರುವ 88 ರೈತರ ನೀರಾವರಿ ಕೃಷಿ ಜಮೀನು ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 30 ವರ್ಷಗಳ ಕಾನೂನು ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ ಎಂದು ವಕೀಲ ಮೋಹನ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 1996.97 ರಲ್ಲಿ ಅಂದಿನ ಸರ್ಕಾರದ ಅವಧಿಯಲ್ಲಿ ಆಶ್ರಯ ಬಡಾವಣೆ ನಿರ್ಮಾಣದ ಉದ್ದೇಶಕ್ಕಾಗಿ 88 ರೈತರ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆಯಡಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ರೈತರು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ೨೦೦೦ರಲ್ಲಿ ಕಾಂಗ್ರೆಸ್ ಸರ್ಕಾರವು ಸದರಿ ಜಮೀನು ಆಶ್ರಯ ಬಡಾವಣೆಗೆ ಸೂಕ್ತವಲ್ಲ ಹಾಗೂ ಪುರಸಭೆಗೆ ಜಮೀನಿನ ಅಗತ್ಯವಿಲ್ಲ ಎಂಬ ಕಾರಣ ನೀಡಿ ಭೂಸ್ವಾಧೀನ ಪ್ರಕ್ರಿಯೆಯನ್ನು ಡಿನೋಟಿಫೈ ಮಾಡಿತ್ತು.

ಆದರೆ, ೨೦೦೬-೦೭ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದಿನ ಡಿನೋಟಿಫಿಕೇಷನ್ ಆದೇಶ ಹಿಂಪಡೆದು ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲಾಯಿತು. ಆಗ ಹೆಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಹಾಗೂ ಇಂಧನ ಸಚಿವರಾಗಿದ್ದರು. ರೈತರು ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ೨೦೧೪ರ ಮಾರ್ಚ್ ೨೮ರಂದು ಜಮೀನು ರೈತರ ಸ್ವಾಧೀನದಲ್ಲಿರುವುದನ್ನು ಖಚಿತಪಡಿಸಿ ಆದೇಶ ನೀಡಿತ್ತು. ಆದರೂ ಸರ್ಕಾರ ಮತ್ತು ಪುರಸಭೆ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಿಟ್ ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಸುದೀರ್ಘ ವಿಚಾರಣೆಯ ಬಳಿಕ ೨೦೨೬ರ ಸೆಪ್ಟೆಂಬರ್ ೨೧ರಂದು ಉಚ್ಚ ನ್ಯಾಯಾಲಯವು ಸರ್ಕಾರ ಹಾಗೂ ಪುರಸಭೆಯ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಇದರಿಂದ ಮೂರು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ರೈತರಿಗೆ ನ್ಯಾಯ ದೊರೆತಂತಾಗಿದೆ ಎಂದು ಹೇಳಿದರು.ನಾಲ್ಕು ಪಥದ ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗಿದ್ದು, ಪರಿಹಾರ ನೀಡಿದ ಬಳಿಕವೂ ಕೃಷಿಗೆ ಯೋಗ್ಯವಾಗಿದ್ದ ಜಮೀನುಗಳನ್ನು ವಿರೂಪಗೊಳಿಸಲಾಗಿದೆ. ರಸ್ತೆ ಕಾಮಗಾರಿಯೂ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಕೆಯಾಗದೆ, ರೈತರು ಹಾಗೂ ಸಾರ್ವಜನಿಕರ ಹಣ ವ್ಯರ್ಥವಾಗಿದೆ ಎಂದು ಆರೋಪಿಸಿದರು. ಸುಮಾರು ೩೦ ವರ್ಷಗಳಿಂದ ಜಮೀನು ಮಾರಾಟ, ಅಡಮಾನ, ಭೋಗ್ಯ ಹಾಗೂ ಮನೆ ನಿರ್ಮಾಣ ಸೇರಿದಂತೆ ತಮ್ಮ ಜಮೀನಿನ ಮೇಲೆ ಸ್ವತಂತ್ರವಾಗಿ ವ್ಯವಹಾರ ನಡೆಸಲು ಸಾಧ್ಯವಾಗದೆ ರೈತರು ಸಂಕಷ್ಟ ಅನುಭವಿಸಿದ್ದಾರೆ. ಈ ಹೋರಾಟದ ನಡುವೆ ಕೆಲ ರೈತರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೂ ನ್ಯಾಯ ಸಿಕ್ಕಿರುವುದು ಸಮಾಧಾನದ ಸಂಗತಿ ಎಂದು ಮೋಹನ್ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಂಜುಂಡೇಗೌಡ, ಚಂದ್ರೇಗೌಡ, ರಂಗನಾಥ್, ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ