ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಎನ್ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಣಿಬೆನ್ನೂರು: ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಗೆಲುವು ಎನ್ಡಿಎ ಕಾರ್ಯಕರ್ತರ ಮುಖಂಡರ ಸಂಘಟಿತ ಹೋರಾಟದ ಗೆಲುವಾಗಿದೆ. ಈ ಚುನಾವಣೆ ಆಡಳಿತ ಪಕ್ಷಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೂಡ ಎನ್ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಪ್ರಕಟಣೆಯಲ್ಲಿ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ನಾಲ್ಕೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗದೆ ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಎನ್ಡಿಎ ದಿಗ್ವಿಜಯ ಸಾಧಿಸಿದೆ. ಚುನಾವಣಾ ಸೋಲಿಗೆ ಮತಪಟ್ಟಿ ಪರಿಷ್ಕರಣೆ, ಇವಿಎಂ ದೋಷ ಎಂದೆಲ್ಲ ಇಲ್ಲಸಲ್ಲದ ಸಬೂಬು ನೀಡಿ ಜನರ ನಡುವೆ ಗೊಂದಲ ಸೃಷ್ಟಿಸುತ್ತಿರುವ ಕಾಂಗ್ರೆಸ್ ಪಕ್ಷ ಈಗ ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಸೋತಿದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ , ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ,ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಕೆ.ಎಂ. ಸುರೇಶ್ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಎಸ್.ವಿ. ಸಂಕನೂರ ಅಭೂತಪೂರ್ವ ಗೆಲುವು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ತಳಮಟ್ಟದ ಸಮನ್ವಯಕ್ಕೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.