ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ವೈ.ಮೇಟಿ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಈ ಭಾಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಭರವಸೆ ನೀಡದಿದ್ದರೂ ನಮ್ಮ ಸರ್ಕಾರ ಯುಕೆಪಿ 3ನೇ ಹಂತದ ಯೋಜನೆಯಲ್ಲಿ ಭೂ ಸಂತ್ರಸ್ತರಾಗಿರುವ ಗ್ರಾಮೀಣ ಭಾಗದ ರೈತರಿಗೆ ಪರಿಹಾರ ವಿತರಣೆ ಮಾಡಿದೆ. ಬೊಮ್ಮಾಯಿ ಅವರ ಸರ್ಕಾರ ಇದನ್ನು ನೀಡಲು ವಿಫಲವಾಗಿದ್ದರೂ ನಾವು ನೀಡಿದ್ದೇವೆ. ಆಲಮಟ್ಟಿ ಅಣೆಕಟ್ಟು ಎತ್ತರ ವಿಚಾರವಾಗಿ ಸದನದಲ್ಲಿ ನಿರ್ಣಯ ಮಂಡಿಸಿದ್ದು, ಈ ಯೋಜನೆ ಜಾರಿಗೆ ನಮ್ಮ ಬದ್ಧತೆ ತೋರಿದ್ದೇವೆ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆಯೇ ಇಲ್ಲವೋ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ವಿಪಕ್ಷದವರು ಇದನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಈ ಯೋಜನೆ ಫಲಾನುಭವಿಗಳು ನಾವು ಈ ಹಿಂದೆ ಬಿಜೆಪಿಗೆ ಮತ ಹಾಕಿದ್ದಾಗ ನಮಗೆ ಯಾವುದೇ ನೆರವಾಗಿರಲಿಲ್ಲ. ಆದರೆ ಮುಂದೆ ನಿಮ್ಮ ಋಣ ತೀರಿಸುತ್ತೇವೆ ಎಂದು ಉಪಕಾರ ಸ್ಮರಣೆ ಮಾಡುತ್ತಿದ್ದಾರೆ. ಇದು ನಮಗೆ ಸಂತೋಷದ ವಿಚಾರ. ದಾವಣಗೆರೆಯಾಗಲಿ, ಬಾಗಲಕೋಟೆಯಾಗಲಿ ನಗರ ಪ್ರದೇಶಗಳಲ್ಲಿ ಜನ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಬಿಜೆಪಿಗೆ ಜನರಿಂದ ತಕ್ಕ ಪಾಠ:
ಬೆಲೆ ಏರಿಕೆ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿರುವ ಬಿಜೆಪಿಯವರಿಗೆ ಜನರು ತಕ್ಕ ಪಾಠ ಕಲಿಸಬೇಕು. ಹಿರಿಯ ನಾಯಕನ ಬೇಡಿಕೆಗಳನ್ನು ನಾವು ಈಡೇರಿಸಿ, ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇವೆ. ಎರಡೂ ಕ್ಷೇತ್ರಗಳ ಜನ ಇಡೀ ರಾಜ್ಯಕ್ಕೆ ದೊಡ್ಡ ಸಂದೇಶ ರವಾನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ತಮ್ಮ ಬದುಕಿಗಾಗಿ ವಲಸೆ ಹೋಗಿದ್ದಾರೆ. ಅವರನ್ನು ನಾವು ವಾಪಸ್ ಕರೆತರುವ ಕೆಲಸ ಮಾಡಬೇಕಾಗಿದೆ. ಈ ಮಧ್ಯೆ ಬಾಗಲಕೋಟೆ ಕೆಲವು ವಾರ್ಡ್‌ಗಳಲ್ಲಿ ಹೊರಗಡೆಯಿಂದ ಬಂದಿರುವ ವಿದ್ಯಾರ್ಥಿಗಳಿದ್ದು, ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರ ಊರಿನಲ್ಲೂ ಮತ ಇದೆ, ಇಲ್ಲೂ ಮತ ಇದೆ. ನಮ್ಮ ಅಭ್ಯರ್ಥಿ ಇಂತಹವರ ಮತದಾರರ ಗುರುತಿನ ಚೀಟಿ ಕಸಿದಿಟ್ಟುಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮತಹಾಕಬೇಕು. ಇಲ್ಲದಿದ್ದರೆ ಫೇಲ್ ಮಾಡುತ್ತೇವೆ. ತೊಂದರೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಿದ್ದೇನೆ. ಎರಡು ಮತಗಳಿರುವವರನ್ನು ಪತ್ತೆ ಹಚ್ಚಲು ಒಂದು ತಂಡವನ್ನೇ ಮೀಸಲಿಟ್ಟಿದ್ದೇವೆ. ಇಂತಹವರನ್ನು ಬಂಧಿಸಲು ಅಕಾಶವಿದೆಯೇ ಎಂದು ಪರಿಶೀಲಿಸುತ್ತಿದ್ದು, ಆದಷ್ಟು ಬೇಗ ಇವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಅದರಲ್ಲಿ ತಪ್ಪೇನಿದೆ. ಪಕ್ಷದ ತೀರ್ಮಾನವನ್ನು ನಾವಿಬ್ಬರೂ ಒಪ್ಪುವುದಾಗಿ ಹೇಳಿದ್ದೇವೆ. ಪಕ್ಷ ಹೇಳಿದ್ದನ್ನು ಅವರು ಒಪ್ಪುತ್ತಾರೆ, ನಾನು ಒಪ್ಪಿಕೊಳ್ಳುವೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಮನೆಗಳಿಗೆ ತೆರಳಿ ಧಮಕಿ ಹಾಕುತ್ತಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಈ ಕೆಲಸವನ್ನು ಬಿಜೆಪಿಯವರು ಅಸ್ಸಾಂನಲ್ಲಿ ಈಗಾಗಲೇ ಮಾಡುತ್ತಿದ್ದಾರೆ. ಇಲ್ಲಿ ನಮ್ಮ ಮೇಲೆ ಈ ಆರೋಪ ಮಾಡುತ್ತಿದ್ದಾರೆ. ನಾವು ಎಲ್ಲರಿಗೂ ಈ ಯೋಜನೆ ತಲುಪಿಸುತ್ತಿದ್ದು, ಜನರು ಸಂತೋಷದಿಂದ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳಿಗೆ ಧಮಕಿ ಹಾಕುತ್ತಿದ್ದಾರೆ ಎಂದು ತಿರುಗೇಟು ನೀಡಿದರು.