ಕನ್ನಡಪ್ರಭ ವಾರ್ತೆ ಅಥಣಿ ಸಮಾಜದ ಪ್ರತಿಯೊಂದು ಹೆಣ್ಣು ಮಗಳನ್ನು ಗೌರವದಿಂದ ಕಂಡಾಗ ಮಾತ್ರ ಮಹಿಳೆ ಕುಟುಂಬದ ಶಕ್ತಿಯಾಗಿ ನಿಲ್ಲಲು ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಸಮಾಜದ ಪ್ರತಿಯೊಂದು ಹೆಣ್ಣು ಮಗಳನ್ನು ಗೌರವದಿಂದ ಕಂಡಾಗ ಮಾತ್ರ ಮಹಿಳೆ ಕುಟುಂಬದ ಶಕ್ತಿಯಾಗಿ ನಿಲ್ಲಲು ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.ಇಲ್ಲಿನ ಗಚ್ಚಿನಮಠದ ಸಭಾಂಗಣದಲ್ಲಿ ಮಂಗಳವಾರ ಭರವಸೆಯ ಬೆಳಕು ಫೌಂಡೇಶನ್ ದ್ವಿತೀಯ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮುತ್ತೈದೆಯರೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಿಂದ ಬಂದಿರುವ ನಾನು ಹಳ್ಳಿ ಜನರ ಮತ್ತು ಹೆಣ್ಣು ಮಕ್ಕಳ ಕಷ್ಟ ನೋವು ನಲಿವುಗಳ ಜೊತೆ ಬೆಳೆದಿದ್ದೇನೆ. ಅದಕ್ಕಾಗಿ ರಾಜ್ಯದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ಶಕ್ತಿಯನ್ನು ದೇವರು ನನಗೆ ಕರುಣಿಸಿದ್ದಾನೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದರ ಜೊತೆಗೆ ಮಹಿಳೆಯರು, ಮಕ್ಕಳು ಮತ್ತು ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಬೇಕೆಂಬುದೇ ನನ್ನ ಉದ್ದೇಶವಾಗಿದೆ ಎಂದರು.ವಿಶ್ವಗುರು ಬಸವಣ್ಣನವರ ಕಾಯಕ ತತ್ವವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ರೂಢಿಸಿಕೊಂಡು ಆದರ್ಶ ಜೀವನವನ್ನು ನಡೆಸಬೇಕು. ಬಸವಣ್ಣನವರ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ. ಮೊದಲಿನ ಕಾಲದ ಹೆಣ್ಣು ಮಕ್ಕಳು ಕಾನೂನು ಹೋರಾಟ ಮಾಡುತ್ತಿರಲಿಲ್ಲ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಸಂವಿಧಾನ ಮಹಿಳೆಯರಿಗೆ ಅನೇಕ ಹಕ್ಕು ಮತ್ತು ಕಾನೂನುಗಳನ್ನ ರೂಪಿಸಿದೆ. ಅವುಗಳನ್ನು ಪ್ರತಿಯೊಬ್ಬ ಮಹಿಳೆಯರು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಭರವಸೆಯ ಬೆಳಕು ಫೌಂಡೇಶನ್ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುವುದರ ಜೊತೆಗೆ ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುತ್ತ ಸಮಾಜದಲ್ಲಿ ಉತ್ತಮ ಸೇವೆ ಮಾಡುತ್ತಿದೆ. ರೂಪಾ ಕಾಂಬಳೆ ಹಾಗೂ ಅವರ ಸಂಗಡಿಗರಿಂದ ಈ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಮುಂದುವರಿಯಲಿ ಶುಭ ಹಾರೈಸಿದರು.ಈ ವೇಳೆ ತಹಸೀಲ್ದಾರ್ ಸಿದ್ದರಾಯ ಬೋಸಗಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ,ತಾಲೂಕ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಬಿಸಿಎಂ ವಿಸ್ತರಣಾ ಅಧಿಕಾರಿ ವೆಂಕಟೇಶ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಅಬಕಾರಿ ಇಲಾಖೆ ನಿರೀಕ್ಷಕ ಮಹಾಂತೇಶ ಬಂಡಿವಡ್ಡರ, ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷ ರೂಪಾ ಕಾಂಬಳೆ, ಗೀತಾ ಮಡ್ಡಿ, ವೈಶಾಲಿ ಮೇಲ್ಗಡೆ, ಕಾದಂಬರಿ ಅಕ್ಕೋಳ, ಹಣಮಂತ ಕುರಬರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ರೂಪಾ ಕಾಂಬಳೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಜಯ ಹುದ್ಧಾರ ನಿರೂಪಿಸಿದರು. ಸವಿತಾ ಕಾಂಬಳೆ ವಂದಿಸಿದರು.-------

ಬಾಕ್ಸ್‌ಸಮಸ್ಯೆ ಆಲಿಸಿ ಸುಸ್ತಾದ ನಾಗಲಕ್ಷ್ಮಿ

ಸುಕ್ಷೇತ್ರ ಗಚ್ಛಿನಮಠದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಂದ ಸಂವಾದ ಜರುಗಿತು. ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಅನೇಕ ದೂರು ಮತ್ತು ಸಮಸ್ಯೆಗಳಿಗೆ ಅಧ್ಯಕ್ಷರು ಖಡಕ್ ಎಚ್ಚರಿಕೆ ನೀಡುವ ಮೂಲಕ ಪರಿಹಾರಕ್ಕೆ ಸೂಚನೆ ನೀಡಿದರು. ನಂತರ ಅನೇಕ ಮಹಿಳೆಯರು ತಮ್ಮ ವೈಯಕ್ತಿಕ ಸಮಸ್ಯೆ ಹಾಗೂ ಸರ್ಕಾರದಿಂದ ಪಡೆದುಕೊಳ್ಳುವ ಸವಲತ್ತುಗಳಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅನೇಕ ದೂರುಗಳನ್ನು ನೀಡಿದರು. ನೂರಾರು ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷೆ ಅವುಗಳಿಗೆ ತಕ್ಷಣದಲ್ಲಿಯೇ ಪರಿಹಾರಗಳನ್ನು ರೂಪಿಸಲು ಪ್ರಯತ್ನ ಮಾಡಿದರು. ಸತತ ಮೂರು ಗಂಟೆಯವರೆಗೆ ಮಹಿಳೆಯರ ಸಮಸ್ಯೆ, ಅವುಗಳಿಗೆ ತಕ್ಷಣದಿಂದಲೇ ಪರಿಹಾರ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.-------