ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಬೆಮುಲ್) 2025-26ನೇ ಸಾಲಿನಲ್ಲಿ ₹ 12.59 ಕೋಟಿ ಲಾಭಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ₹510 ಕೋಟಿ ವಹಿವಾಟು ನಡೆಸಲಾಗಿದೆ. ಇದು ಇತಿಹಾಸದಲ್ಲೇ ಅತೀ ಹೆಚ್ಚು ವಹಿವಾಟು ಮಾಡಿ ದಾಖಲೆ ನಿರ್ಮಿಸಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ ₹ 37.20 ರಂತೆ ಒಟ್ಟು ₹ 331 ಕೋಟಿ ಹಾಲಿನ ಬಿಲ್ ಪಾವತಿಸಲಾಗಿದೆ ಎಂದರು.
100 ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಇದೇ ಮೊದರ ಬಾರಿ 1 ವರ್ಷದಲ್ಲಿ 100 ನೂತನ ಸಂಘಗಳನ್ನು ಸ್ಥಾಪಿಸಿ ಐತಿಹಾಸಿಕ ದಾಖಲೆ ನಿರ್ಮಿಸಲಾಗಿದೆ. ಸದ್ಯ ಒಟ್ಟು 685 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ನಿತ್ಯ ಸರಾಸರಿ 2.50 ಲಕ್ಷ ಕೆಜಿ ಹಾಲು ಶೇಖರಣೆ ಮಾಡಲಾಗಿದೆ. ಕಳೆದ ಸಾಲಿಗೆ ಹೋಲಿಸಿದ್ದಲ್ಲಿ ನಿತ್ಯ 50 ಸಾವಿರ ಕೆಜಿ ಹಾಲು ಶೇಖರಣೆ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿ ಇತಿಹಾಸದಲ್ಲೇ ಅತೀ ಹೆಚ್ಚು 2.75 ಲಕ್ಷ ಕೆ.ಜಿ. ಹಾಲು ಶೇಖರಣೆ ಮಾಡಿ ದಾಖಲೆ ನಿರ್ಮಿಸಲಾಗಿದೆ. ಆಕಳು ಹಾಲು 6.70 ಕೋಟಿ ಕೆ.ಜಿ. ಮತ್ತು ಎಮ್ಮೆ ಹಾಲು 1.50 ಕೋಟಿ ಕೆ.ಜಿ. ಹೀಗೆ ಒಟ್ಟು 8.20 ಕೋಟಿ ಕೆ.ಜಿ. ಹಾಲು ಸಂಗ್ರಹಿಲಾಗಿದೆ ಎಂದು ಮಾಹಿತಿ ನೀಡಿದರು.ಒಟ್ಟು ₹ 31 ಕೋಟಿ ಪ್ರೋತ್ಸಾಹಧನ ಸರ್ಕಾರದಿಂದ ಪಾವತಿಸಲಾಗಿದೆ. ಜನವರಿಯಿಂದ ಫೆಬ್ರವರಿ ಅಂತ್ಯದವರೆಗೆ ಒಟ್ಟು ₹ 7.50 ಕೋಟಿ ಪ್ರೋತ್ಸಾಹ ಧನ ಬಿಡುಗಡೆಯಾಗಬೇಕಿದೆ. ಒಕ್ಕೂಟದಿಂದ 550 ಮೆ.ಟನ್ ತುಪ್ಪ, 230 ಮೆ.ಟನ್ ಪನ್ನೀರ್, 35 ಮೆ.ಟನ್ ಪೇಡಾ ಉತ್ಪಾದಿಸಲಾಗಿದೆ. ಬೆಳಗಾವಿ ಹಾಗೂ ಗೋವಾ ಮಾರುಕಟ್ಟೆ ಪ್ರದೇಶದಲ್ಲಿ ಒಟ್ಟು 55 ಸಂಖ್ಯೆಯ ಫ್ರಾಂಚೈಸಿಗಳನ್ನು ಪ್ರಾರಂಭಿಸಲಾಗಿದೆ. ಅಲ್ಲದೇ, ಬೆಳಗಾವಿ, ಗೋವಾ ಮತ್ತು ಪುಣೆ ಮಾರುಕಟ್ಟೆ ಪ್ರದೇಶದಲ್ಲಿ ನಿತ್ಯ ಶೇ.1 ಲಕ್ಷ ಲೀಟರ್ ಸ್ಯಾಚೆಟ್ ಹಾಲು ಮತ್ತು 13 ಸಾವಿರ ಲೀಟರ್ ಮೊಸರು ಮಾರಾಟ ಮಾಡಲಾಗಿದೆ. ನೆರೆಯ ಆಂಧ್ಯ ಪ್ರದೇಶ ರಾಜ್ಯ ಸರ್ಕಾರದ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಕುಡಿಯಲು ನಿತ್ಯ 25 ಸಾವಿರ ಲೀಟರ್ ಫ್ಲೆಕ್ಸಿ ಹಾಲು ಮಾರಾಟ ಮಾಡಲಾಗಿದೆ ಎಂಧು ತಿಳಿಸಿದರು.
ಕಳೆದ 2024-25ನೇ ಸಾಲಿನಲ್ಲಿ ಒಕ್ಕೂಟ ಗಳಿಸಿದ ₹ 13.26 ಕೋಟಿ ಲಾಭದಲ್ಲಿ ಹಾಲು ಉತ್ಪಾದಕರಿಗೆ ಹಾಗೂ ಸಂಘಗಳಿಗೆ ಶೇ.60ರ ಅನುದಾನದಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ. ₹ 70 ಲಕ್ಷ ವೆಚ್ಚದಲ್ಲಿ 437 ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರಗಳು, ₹ 1.84 ಕೋಟಿ ಮೌಲ್ಯದ 12500 ರಬ್ಬರ್ ಮ್ಯಾಟ್, ₹ 11 ಲಕ್ಷ ಮೌಲ್ಯದ 65 ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳು, ₹ 2 ಕೋಟಿಯನ್ನು 40 ಹಾಲು ಉತ್ಪಾದಕ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಹಾಗೂ ₹ 1.80 ಕೋಟಿಯನ್ನು 15 ನೂತನ ಬಿಎಂಸಿ ಘಟಕಗಳ ಸ್ಥಾಪನೆಗೆ ನೀಡಲಾಗಿದೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ.ಬಸವರಾಜ ಪರವಣ್ಣನವರ, ಬಾಬುರಾವ ವಾಗ್ಮುರೆ, ವಿರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರಿ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಬಸವರಾಜ ಮಾಳೆದವರ, ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ.ವಿ.ಎಸ್ ಉಪಸ್ಥಿತರಿದ್ದರು.
-----------ಬಾಕ್ಸ್
ಬೆಮುಲ್ ಮೇಲೆ ಯುದ್ದದ ಪರಿಣಾಮವಿಲ್ಲಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದುವರೆಗೆ ಬೆಮುಲ್ ಕಾರ್ಯಚಟುವಟಿಕೆಗಳ ಮೇಲೆ ಬೀರಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಮ್ಮ ಉತ್ಪನ್ನಗಳ ತಯಾರಿಕೆಗೆ ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಆದರೆ ಯುದ್ಧ ಶೀಘ್ರದಲ್ಲೇ ನಿಂತರೆ ಎಲ್ಲರಿಗೂ ಒಳ್ಳೆಯದು ಎಂದರು.
ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಿಸುತ್ತಿದ್ದಾರೆ. ಆದರೆ, ತ್ವರಿತವಾಗಿ ಹಣ ಲಭ್ಯವಾಗುವ ಕಾರಣದಿಂದ ಕೆಲವರು ಬೇರೆ ಸಂಸ್ಥೆಗಳಿಗೆ ಹಾಲು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೇ, ಕಣಬರ್ಗಿ ಬಳಿ ಮೇಗಾ ಡೇರಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ, ಮಾಳಮಾರುತಿ ಬಡಾವಣೆಯಲ್ಲಿ ಲೀಸ್ ಆಧಾರದ ಮೇಲೆ ನೀಡಿರುವ 18 ಎಕರೆ ಜಾಗವನ್ನು ಒಕ್ಕೂಟಕ್ಕೆ ಖರೀದಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.