ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶ್ರೀರಾಮನವಮಿ ಹಬ್ಬವನ್ನು ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ರಾಮದೇವ ಗಲ್ಲಿ, ಕಣಬರ್ಗಿ, ರಾಮತೀರ್ಥ ನಗರ ಸೇರಿದಂತೆ ವಿವಿಧೆಡೆ ಶ್ರೀರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳು, ಅಭಿಷೇಕಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.ರಾಮಮಂದಿರಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದರು. ತೊಟ್ಟಿಲು ಮೆರವಣಿಗೆ ವಿಶೇಷ ಆಕರ್ಷಣೀಯವಾಗಿತ್ತು. ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಜನೆ, ರಾಮಾಯಣ ಪಠಣ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸಂಜೆಯ ವೇಳೆಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತನ ವೇಷಭೂಷಣದಲ್ಲಿದ್ದ ಕಲಾವಿದರು ಮೆರವಣಿಗೆಯ ಆಕರ್ಷಣೆ ಕೇಂದ್ರಬಿಂದುವಾಗಿದ್ದರು. ವಿವಿಧ ಭಜನಾ ಮಂಡಳಿಗಳು ಭಕ್ತಿಗೀತೆಗಳನ್ನು ಹಾಡಿ ಹಬ್ಬದ ಸಂಭ್ರಮ ಹೆಚ್ಚಿಸಿದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಭಕ್ತರು ಹೂವಿನ ಮಳೆಯ ಮೂಲಕ ಸ್ವಾಗತ ಕೋರಿದರು. ಪೊಲೀಸ್ ಭದ್ರತೆಯಲ್ಲೇ ಮೆರವಣಿಗೆ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ, ಬೆಳಗಾವಿಯಲ್ಲಿ ರಾಮನವಮಿ ಹಬ್ಬ ಧಾರ್ಮಿಕ ಉತ್ಸಾಹ ಮತ್ತು ಸಾಂಸ್ಕೃತಿಕ ವೈಭವದಿಂದ ಗಮನಸೆಳೆಯಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಿಂದ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶ್ರೀರಾಮ, ಶಿವಾಜಿ ಮಹಾರಾಜರ ಪರವಾಗಿ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಅಂಬೇಡ್ಕರ್ ರಸ್ತೆಯ ಮೂಲಕ ಪ್ರಾರಂಭವಾದ ಮೆರವಣಿಗೆ ಚನ್ನಮ್ಮ ವೃತ್ತದ ಮೂಲಕ ಹಾಯ್ದು ಕಾಲೇಜು ರಸ್ತೆ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಈ ಅದ್ಧೂರಿ ಮೆರವಣಿಗೆ ಶ್ರೀರಾಮ ನವಮಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿತು. ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು.